ಅ.12ರಂದು ಮಡಗಾಂವ್-ಮಂಗಳೂರು ಸೆಂಟ್ರಲ್ ರೈಲಿನ ಸಂಚಾರ ಕುಮಟಾವರೆಗೆ ಮಾತ್ರ
ಉಡುಪಿ : ಮಡಗಾಂವ್ ಹಾಗೂ ಕುಮಟಾಗಳ ನಡುವೆ ಹಳಿಯ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಅ.12ರಂದು ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ದೈನಂದಿನ ರೈಲಿನ ಸಂಚಾರ ಕುಮಟವರೆಗೆ ಮಾತ್ರವಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಅ.12ರಂದು ಮಂಗಳೂರಿನಿಂದ ತೆರಳುವ ರೈಲು ನಂ.06602 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ರೈಲು ಕುಮಟಾವರೆಗೆ ಮಾತ್ರ ಸಂಚರಿಸಲಿದೆ. ಕುಮಟಾದಿಂದ ಮಡಂಗಾವ್‌ವರೆಗಿನ ಅದರ ಸಂಚಾರ ರದ್ದುಗೊಳ್ಳಲಿದೆ.
ಅದೇ ರೀತಿ ಅ.12ರಂದು ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ರೈಲು ನಂ.06601 ತನ್ನ ಪ್ರಯಾಣವನ್ನು ನಿಗದಿತ ಅವಧಿಗೆ ಕುಮಟಾದಿಂದ ಪ್ರಾರಂಭಿಸಲಿದೆ. ಹೀಗಾಗಿ ಮಡಗಾಂವ್ ಜಂಕ್ಷನ್‌ನಿಂದ ಕುಮಟಾ ವರೆಗಿನ ಅದರ ಸಂಚಾರ ರದ್ದುಗೊಳ್ಳಲಿದೆ.
ಇದರೊಂದಿಗೆ ಅ.10ರಂದು ಕಡವಾ ಮತ್ತು ರತ್ನಗಿರಿ ನಡುವೆ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ತಿರುವನಂತಪುರಂ ಮತು ಲೋಕಮಾನ್ಯ ತಿಲಕ್ ನಡುವೆ ಸಂಚರಿಸುವ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ ತೋಕೂರು ಹಾಗೂ ರತ್ನಗಿರಿ ನಿಲ್ದಾಣಗಳ ನಡುವೆ ಮೂರು ಗಂಟೆಗಳ ಕಾಲ ವ್ಯತ್ಯಯಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.