×
Ad

ಉಡುಪಿ | ನ.21ರಿಂದ ಮಾಹೆ ಘಟಿಕೋತ್ಸವ; 8450 ಮಂದಿಗೆ ಪದವಿ ಪ್ರದಾನ

Update: 2025-11-19 21:16 IST

ಉಡುಪಿ, ನ.19: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ 33ನೇ ಘಟಿಕೋತ್ಸವ ಇದೇ ನ.21ರಿಂದ 23ರವರೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯಲಿದೆ. ಮೂರು ದಿನಗಳಲ್ಲಿ ಒಟ್ಟು 6,148 ಮಂದಿ ವಿದ್ಯಾರ್ಥಿಗಳಿಗೆ ವಿವಿಧ ಪದವಿಗಲನ್ನು ಪ್ರದಾನ ಮಾಡಲಾಗುವುದು ಎಂದು ಮಾಹೆಯ ಕುಲಪತಿ ಲೆ.ಜ.(ಡಾ) ಎಂ.ಡಿ.ವೆಂಕಟೇಶ್ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಮಾಹೆಯ ಬೆಂಗಳೂರು ಕ್ಯಾಂಪಸ್‌ನಲ್ಲಿ ನವೆಂಬರ್ 29 ಮತ್ತು 30ರಂದು ಎರಡನೇ ಘಟಿಕೋತ್ಸವ ನಡೆಯಲಿದ್ದು, ಇದರಲ್ಲಿ 902 ಮಂದಿ ಪದವಿ ಸ್ವೀಕರಿಸಲಿದ್ದು, 900 ಮಂದಿ ಆನ್‌ಲೈನ್ ಡಿಗ್ರಿಯನ್ನೂ ಸ್ವೀಕರಿಸಲಿದ್ದಾರೆ. ಈ ಮೂಲಕ ಎರಡು ಕ್ಯಾಂಪಸ್‌ಗಳಲ್ಲಿ ಒಟ್ಟಾರೆಯಾಗಿ 8450 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ ಎಂದು ಅವರು ವಿವರಿಸಿದರು.

ಮಣಿಪಾಲ ಮತ್ತು ಬೆಂಗಳೂರು ಕ್ಯಾಂಪಸ್‌ಗಳಲ್ಲಿ ನಡೆಯುವ ಈ ಘಟಿಕೋತ್ಸವದಲ್ಲಿ ಶೈಕ್ಷಣಿಕ ದಿಗ್ಗಜರು, ಕ್ಷೇತ್ರಪರಿಣತರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಮಣಿಪಾಲದಲ್ಲಿ ನಡೆಯುವ 3 ದಿನಗಳ ಸಮಾರಂಭದಲ್ಲಿ ಹೊಸದಿಲ್ಲಿ ಎನ್‌ಸಿಆರ್‌ನ ಶಿವನಾಡಾರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅನನ್ಯಾ ಮುಖರ್ಜಿ, ಹೊಸದಿಲ್ಲಿಯ ಗೂಗಲ್ ಕ್ಲೌಡ್ ಏಷ್ಯಾ ಪೆಸಿಫಿಕ್ ಸ್ಟ್ರಾಟಜೀಸ್ ಇನಿಶಿಯೇಟಿವ್ಸ್‌ನ ಉಪಾಧ್ಯಕ್ಷ ಬಿಕ್ರಮ್ ಸಿಂಗ್ ಬೇಡಿ ಹಾಗೂ ಗ್ಲಾಸ್ಗೊದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆ್ಯಂಡ್ ಸರ್ಜನ್ಸ್‌ನ ಅಧ್ಯಕ್ಷ ಪ್ರೊ. ಡಾ.ಹ್ಯಾನಿ ಎಟೀಬಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಯುವ ಎರಡು ದಿನಗಳ ಘಟಿಕೋತ್ಸವ ದಲ್ಲಿ ಆಕ್ಸಿಸ್ ಬ್ಯಾಂಕ್‌ನ ಸಮೂಹ ಕಾರ್ಯನಿರ್ವಾಹಕಿ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ರಾಜ್‌ಕಮಲ್ ವೆಂಪತಿ ಹಾಗೂ ರೆವೊಲ್ಯೂಟ್ ಇಂಡಿಯಾದ ಸಿಇಒ ಪರೋಮಾ ಚಟರ್ಜಿ ಮುಖ್ಯ ಅತಿಥಿಗಳಾಗಿರುವರು ಎಂದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಮಣಿಪಾಲದಲ್ಲಿ ನಡೆಯುವ ಮೂರು ದಿನಗಳ ಘಟಿಕೋತ್ಸವದಲ್ಲಿ 4,950 ಮಂದಿ ವಿದ್ಯಾರ್ಥಿಗಳು ಸ್ವತಹ ಹಾಜರಿದ್ದು ಪದವಿ ಸ್ವೀಕರಿಸಿದರೆ, 1,198 ಮಂದಿ ಅಂಚೆಮೂಲಕ ಪದವಿ ಸ್ವೀಕರಿಸಲಿದ್ದಾರೆ. ಬೆಂಗಳೂರು ಕ್ಯಾಂಪಸ್‌ನಲ್ಲಿ 728 ಮಂದಿ ನೇರವಾಗಿ ಹಾಗೂ 189 ಮಂದಿ ಅಂಚೆ ಮೂಲಕ ಪದವಿ ಸ್ವೀಕರಿಸುವರು ಎಂದರು.

ಇದರೊಂದಿಗೆ ಮಾಹೆ ಆನ್‌ಲೈನ್‌ನ 625 ಮಂದಿ ಸಮಾರಂಭದಲ್ಲಿ ಭಾಗಿಯಾಗಿ ಹಾಗೂ 760 ಮಂದಿ ಅಂಚೆಯ ಮೂಲಕ ಪಡೆಯಲಿದ್ದಾರೆ. ಒಟ್ಟಾರೆಯಾಗಿ ಮಾಹೆ ಆನ್‌ಲೈನ್‌ನ 1,385 ಮಂದಿಗೆ ಈ ಬಾರಿ ಪದವಿ ಪ್ರದಾನ ನಡೆಯಲಿದೆ. ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಮ್ಯಾನೇಜ್‌ಮೆಂಟ್, ಸಮಾಜಶಾಸ್ತ್ರ ಸೇರಿದಂತೆ ವಿವಿಧ ಶೈಕ್ಷಣಿಕ ವಿಭಾಗ ವಿದ್ಯಾರ್ಥಿಗಳು ಪದವಿ ಪಡೆಯುವವರಲ್ಲಿ ಸೇರಿದ್ದಾರೆ.

ಮಣಿಪಾಲದಲ್ಲಿ ಮೊದಲ ದಿನ 60 ಮಂದಿ ಪಿಎಚ್‌ಡಿ, ನಾಲ್ವರು ಚಿನ್ನದ ಪದಕ, ಎರಡನೇ ದಿನ 45 ಮಂದಿ ಪಿಎಚ್‌ಡಿ, ಮೂವರು ಚಿನ್ನದ ಪದಕ ಹಾಗೂ ಮೂರನೇ ದಿನ 50 ಮಂದಿ ಪಿಎಚ್‌ಡಿ, ಇಬ್ಬರು ಚಿನ್ನದ ಪದಕ ಸ್ವೀಕರಿಸಲಿದ್ದಾರೆ. ಬೆಂಗಳೂರು ಕ್ಯಾಂಪಸ್‌ನಲ್ಲಿ 12 ಮಂದಿ ಪಿಎಚ್‌ಡಿ ಹಾಗೂ ಒಬ್ಬರಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ಡಾ.ವೆಂಕಟೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹೆ ವಿವಿಯ ಡಾನಾರಾಯಣ ಸಭಾಹಿತ್, ಡಾ.ಶರತ್ ಕೆ.ರಾವ್, ಡಾ.ಗಿರಿಧರ್ ಕಿಣಿ ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News