ಉಡುಪಿ ಜಿಲ್ಲೆಯಲ್ಲಿ ಗಂಡು ಹೆಣ್ಣಿನ ಅನುಪಾತ 1000-976: ಡಿಸಿ ಡಾ. ವಿದ್ಯಾಕುಮಾರಿ
ಉಡುಪಿ: ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 1185, ನಗರ ವ್ಯಾಪ್ತಿಯಲ್ಲಿ 9976 ಒಟ್ಟು 11,161 ಜನನ ಪ್ರಕರಣಗಳು ನೋಂದಾವಣಿಯಾದರೆ, ಗ್ರಾಮೀಣ ಪ್ರದೇಶದಲ್ಲಿ 7269, ನಗರ ಪ್ರದೇಶದಲ್ಲಿ 5000 ಒಟ್ಟು 12,269 ಮರಣ ಪ್ರಕರಣಗಳು ನೋಂದಾವಣಿಯಾಗಿವೆ. ಜಿಲ್ಲೆಯಲ್ಲಿ ಒಟ್ಟು 61 ನಿರ್ಜೀವ ಜನನಗಳು ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಹೆಣ್ಣು ಮತ್ತು ಗಂಡಿನ ಅನುಪಾತವು 976ರಷ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯಲ್ಲಿ ಘಟಿಸುವ ಪ್ರತಿಯೊಂದು ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು 21 ದಿನಗಳ ಒಳಗಾಗಿ ಕಡ್ಡಾಯವಾಗಿ ಸೂಕ್ತ ಪ್ರಾಧಿಕಾರದ ಮುಂದೆ ಪ್ರತಿಯೊಬ್ಬರೂ ನೋಂದಾಯಿಸ ಬೇಕು ಎಂದರು.
ಜಿಲ್ಲೆಯಲ್ಲಿ ಆಗುವ ಪ್ರತಿಶತಃ ನೂರರಷ್ಟು ಜನನ, ಮರಣ ಮತ್ತು ನಿರ್ಜೀವ ಜನನಗಳ ಘಟನೆಗಳನ್ನು ವಿಳಂಬವಿಲ್ಲದೇ ನೋಂದಣಿ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಜನನ ಮತ್ತು ಮರಣ ನೋಂದಣಿಯು ಭವಿಷ್ಯದ ಕೆಲಸ ಕಾರ್ಯಗಳಿಗೆ ಇವುಗಳ ಪ್ರಮಾಣಪತ್ರವು ಅವಶ್ಯ ಇದೆ. ಇದನ್ನು ಮನಗಂಡು ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಅವರು ತಿಳಿಸಿದರು.
ಯಾವುದೇ ಮಗುವಿನ ಜನನವನ್ನು ಹೆಸರಿಲ್ಲದೇ ನೋಂದಣಿ ಮಾಡಲು ಅವಕಾಶವಿದ್ದು, ಹೆಸರಿಲ್ಲದೇ ನೋಂದಾಯಿಸಿದ್ದಲ್ಲಿ ಆ ದಿನದಿಂದ 12 ತಿಂಗಳ ಒಳಗಾಗಿ ಮಗುವಿನ ಹೆಸರನ್ನು ಯಾವುದೇ ಶುಲ್ಕವಿಲ್ಲದೇ ರಿಜಿಸ್ಟರ್‌ನಲ್ಲಿ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಜನನ, ಮರಣ ನೋಂದಣಿ ದಾಖಲಾತಿಗಳಲ್ಲಿ ಯಾವುದೇ ಬದಲಾವಣೆ, ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ ಎಂದರು.
ವಿದೇಶದಲ್ಲಿ ಜನಿಸಿದ ಮಗುವಿನ ಜನನವನ್ನು ವಿದೇಶದಲ್ಲಿ ನೋಂದಾವಣೆ ಮಾಡಬಹುದು. ಆದರೆ ಶಿಶುವಿನ ಪೋಷಕರು ಭಾರತೀಯ ಪೌರರಾಗಿ ನಮ್ಮ ದೇಶದಲ್ಲಿ ನೆಲೆಸುವ ಉದ್ದೇಶ ಹೊಂದಿದ್ದಲ್ಲಿ ದೇಶಕ್ಕೆ ಹಿಂದಿರುಗಿದ 60 ದಿನಗಳ ಒಳಗಾಗಿ ನೋಂದಣಿ ಮಾಡಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಜನನ-ಮರಣ ಘಟನೆಗಳನ್ನು ಇ-ಜನ್ಮ ತಂತ್ರಾಶದ ಮೂಲಕ ನೋಂದಣಿ ಮಾಡುವ ಕಾರ್ಯವನ್ನು 2015ರಿಂದಲೇ ಪ್ರಾರಂಭಿಸಲಾಗಿದೆ. ಈ ಕಾರ್ಯವನ್ನು ಯಾವುದೇ ಲೋಪವಿಲ್ಲದಂತೆ ಮಾಡಬೇಕು. ಎಲ್ಲಾ ನೋಂದಣಿ ಘಟಕಗಳು ನಿಯಮಾನುಸಾರ ನೋಂದಣಿ ಕಾರ್ಯಗಳು ನಡೆಯುತ್ತಿರುವ ಬಗ್ಗೆ ಹಾಗೂ ಶೇಕಡ ನೂರರಷ್ಟು ನೋಂದಾವಣೆ ಮಾಡುತ್ತಿರುವ ಬಗ್ಗೆ ಕಂದಾಯ, ನಗರಾಭಿವೃದ್ಧಿ, ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಆಗಿಂದಾಗ್ಗೆ ಪರಿಶೀಲನೆ ನಡೆಸಬೇಕು. ಸಕಾಲದಲ್ಲಿ ಜನನ ಮರಣ ಪ್ರಮಾಣಪತ್ರವನ್ನು ವಿತರಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ವಿ.ದೊಡಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 326 ನೋಂದಣಿ ಘಟಕಗಳು
ಗ್ರಾಮೀಣ ಪ್ರದೇಶದಲ್ಲಿ 30 ದಿನಗಳವರೆಗೆ ಗ್ರಾಪಂ ಕಾರ್ಯದರ್ಶಿಗಳು, ನಗರ ವ್ಯಾಪ್ತಿಗಳಲ್ಲಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಬಂಧಪಟ್ಟ ವೈದ್ಯಾಧಿಕಾರಿಗಳು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರುಗಳು ಜನನ- ಮರಣ ನೋಂದಣಾಧಿಕಾರಿಗಳಾಗಿದ್ದು, ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ 313 ಹಾಗೂ ನಗರ ಪ್ರದೇಶದಲ್ಲಿ 13 ಸೇರಿದಂತೆ ಒಟ್ಟು 326 ನೋಂದಣಿ ಘಟಕಗಳು ಇವೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದರು.
ಜನನ, ಮರಣ ಹಾಗೂ ನಿರ್ಜೀವ ಜನನಗಳ ನೋಂದಣಿಯು 21 ದಿನಗಳ ಒಳಗಾಗಿ ಯಾವುದೇ ಶುಲ್ಕವಿಲ್ಲದೇ ನೋಂದಾಯಿಸಲು ಅವಕಾಶ ಇದೆ. ಘಟನೆ ಸಂಭವಿಸಿ 21 ರಿಂದ 30 ದಿನಗಳವರೆಗೆ 20ರೂ., ಘಟನೆ ಸಂಭವಿಸಿದ 30 ದಿನಗಳ ನಂತರ ಒಂದು ವರ್ಷದವರೆಗೆ 50 ರೂ. ಶುಲ್ಕ ಪಾವತಿಸಿ, ಘಟನೆ ಸಂಭವಿಸಿದ 1 ವರ್ಷದ ನಂತರ ನ್ಯಾಯಾಲಯದ ಆದೇಶ ದೊಂದಿಗೆ 10 ರೂ.ಗಳ ಶುಲ್ಕ ಪಾವತಿಸಿ, ನೋಂದಾಯಿಸಬಹುದಾಗಿದೆ ಎಂದರು.