×
Ad

ಸಂಗೀತ ಮಾಂತ್ರಿಕ ಇಳಯರಾಜರಿಂದ ಕೊಲ್ಲೂರು ಮೂಕಾಂಬಿಕೆಗೆ ವಜ್ರ ಕಿರೀಟ, ಚಿನ್ನಾಭರಣ ಅರ್ಪಣೆ

Update: 2025-09-10 20:53 IST

ಕುಂದಾಪುರ, ಸೆ.10: ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಿಗೆ ಬುಧವಾರ ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ ನಾಲ್ಕು ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಜ್ರಖಚಿತ ಕಿರೀಟ ಹಾಗೂ ಇತರ ಚಿನ್ನಾಭರಣಗಳನ್ನು ಅರ್ಪಿಸಿದ್ದಾರೆ.

ಈ ಹಿಂದೆ ದೇವಿಗೆ ವಜ್ರಖಚಿತ ಹಸ್ತವನ್ನು ನೀಡಿದ್ದ ಕೊಲ್ಲೂರು ಮೂಕಾಂಬಿಕಾ ದೇವಿಯ ಪರಮ ಭಕ್ತನಾಗಿರುವ ಇಳಯರಾಜ್ ಇಂದು ಮೂಕಾಂಬಿಕಾ ದೇವಿಗೆ ವಜ್ರ ಖಚಿತ ಕಿರೀಟ, ಚಿನ್ನಾಭರಣ, ಶ್ರೀ ವೀರಭದ್ರ ದೇವರಿಗೆ ರಜತ ಕಿರೀಟ ಸಹಿತ ಖಡ್ಗವನ್ನು ಸಮರ್ಪಿಸಿದ್ದಾರೆ.

ಕೊಲ್ಲೂರಿನ ಓಲಗ ಮಂಟಪದಿಂದ ರಥಬೀದಿಯಲ್ಲಿ ಪೂರ್ಣಕುಂಭ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕಿರೀಟ ಹಾಗೂ ಚಿನ್ನಾಭರಣಗಳನ್ನು ತಂದು, ಕ್ಷೇತ್ರದ ಅರ್ಚಕರು ಪೂಜಾ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ದೇವರಿಗೆ ಕಿರೀಟ ಹಾಗೂ ವಿವಿಧ ಆಭರಣಗಳನ್ನು ಒಪ್ಪಿಸಲಾಯಿತು. ಬಳಿಕ ದೇವಸ್ಥಾನದ ವತಿಯಿಂದ ಇಳಯರಾಜ ಅವರನ್ನು ಗೌರವಿಸಲಾಯಿತು.

ಗಾನಗಂಧರ್ವ ಕೆ.ಜೆ.ಯೇಸುದಾಸರಂತೆ ಹೆಚ್ಚಾಗಿ ತಮ್ಮ ಹುಟ್ಟುಹಬ್ಬವನ್ನು ಕೊಲ್ಲೂರಿನಲ್ಲೇ ಆಚರಿಸುವ ಇಳಯರಾಜ, ಇಲ್ಲಿ ಸಂಗೀತ ಸೇವೆಯನ್ನೂ ಸಹ ನೀಡುತ್ತಾ ಬಂದಿದ್ದಾರೆ.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಪುತ್ರ ಕಾರ್ತಿಕ್ ಇಳಯರಾಜ, ಮೊಮ್ಮಗ ಯತೀಶ್ ಇಳಯರಾಜ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಸಹಾಯ ಕಾರ್ಯ ನಿರ್ವಹಣಾಧಿಕಾರಿ ತುಂಬಗಿ, ಅರ್ಚಕರಾದ ಶ್ರೀಧರ ಅಡಿಗ, ಕೆ.ಎನ್.ಗೋವಿಂದ ಅಡಿಗ, ವಿಘ್ನೇಶ್ವರ ಅಡಿಗ, ಎನ್.ಸುಬ್ರಮಣ್ಯ ಅಡಿಗ, ಸುರೇಶ್ ಭಟ್, ಶಿವರಾಮ ಅಡಿಗ, ನರಸಿಂಹ ಭಟ್, ಸುದರ್ಶನ್ ಜೋಯಿಸ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ್, ಧನಾಕ್ಷೀ ವಿಶ್ವನಾಥ್ ಪೂಜಾರಿ, ಸುಧಾ ಕೆ. ಬೈಂದೂರು, ಪ್ರಮುಖರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ರತ್ನಾ ರಮೇಶ್ ಕುಂದರ್, ಪ್ರದೀಪ್ ಶೆಟ್ಟಿ ಮಂದರ್ತಿ, ಜಯಕುಮಾರ್ ಕೊಲ್ಲೂರು, ಇಂಜಿನಿಯರ್ ಪ್ರದೀಪ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










 


 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News