ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಗತ್ಯ ಕ್ರಮ: ಡಾ.ತಿಪ್ಪೇಸ್ವಾಮಿ
3 ವರ್ಷಗಳಲ್ಲಿ ಉಡುಪಿ ಜಿಲ್ಲೆಯ 9 ಪ್ರಕರಣಗಳಲ್ಲಿ ಶಿಕ್ಷೆ
ಉಡುಪಿ, ಡಿ.23: ಜಿಲ್ಲೆಯಲ್ಲಿ ಈ ವರ್ಷದ ಎಪ್ರಿಲ್‌ವರೆಗೆ ಒಟ್ಟು 660 ಕಡೆಗಳಲ್ಲಿ ತಪಾಸಣೆ ನಡೆಸಿ ಓರ್ವ ಬಾಲ ಕಾರ್ಮಿಕ ಹಾಗೂ ಮೂವರು ಕಿಶೋರ ಕಾರ್ಮಿಕರು ಸೇರಿದಂತೆ ಒಟ್ಟು 4 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಒಟ್ಟು 5 ಮೊಕದ್ದಮೆಗಳನ್ನು ಹೂಡಲಾಗಿದೆ. 3 ಪ್ರಕರಣಗಳಲ್ಲಿ ದಂಡ ವಿಧಿಸಿ 32,000 ರೂ. ಮೊತ್ತದ ದಂಡ ಮತ್ತು 20,000 ರೂ. ಕಾರ್ಪಸ್ ನಿಧಿ ವಸೂಲು ಮಾಡಲಾಗಿದೆ. ಜಿಲ್ಲೆಯಲ್ಲಿ ಕಳೆದ ಮೂರು ವಷರ್ಗಳಲ್ಲಿ ಒಟ್ಟು 9 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ಗಳೊಂದಿಗೆ ನಡೆಸಿದ ಮಕ್ಕಳು ಮತ್ತು ಹದಿಹರೆಯದವರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬಾಲ ಹಾಗೂ ಕಿಶೋರ ಕಾರ್ಮಿಕರ ನಿಷೇಧ ಕಾಯ್ದೆಯನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸಿ ಮಕ್ಕಳು ಬಾಲ ಕಾರ್ಮಿಕರಾಗುವುದನ್ನು ತಪ್ಪಿಸಬೇಕು. ಇದಕ್ಕಾಗಿ ತಪಾಸಣೆಗಳನ್ನು ಹೆಚ್ಚಿಸಬೇಕು. ಎಲ್ಲ ಇಲಾಖೆಗಳು ಸಮನ್ವಯ ದಿಂದ ಕಾರ್ಯ ನಿರ್ವಹಿಸಿ ಸರಿಯಾದ ದತ್ತಾಂಶಗಳನ್ನು ಸಂಗ್ರಹಿಸಬೇಕು. ಕಾಯ್ದೆ ಅನುಷ್ಟಾನದಲ್ಲಿ ಸಮಸ್ಯೆಗಳಿದ್ದರೆ ಅದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಅಧಿಕಾರಿಗಳು ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ಗಂಭೀರ ವಾಗಿ ಪರಿಗಣಿಸಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಕಾರ್ಯಪಡೆ (ಟಾಸ್ಕ್‌ಫೋರ್ಸ್) ಸಮಿತಿಯ ಸಭೆ ನಡೆಸಬೇಕು. ಸಭೆಯ ವರದಿಯನ್ನು ಒಂದು ವಾರದೊಳಗೆ ಸಂಬಂಧ ಪಟ್ಟ ಇಲಾಖೆಗಳಿಗೆ ನೀಡಬೇಕು. ತಿಂಗಳಲ್ಲಿ ಒಂದು ದಿನ ಮಕ್ಕಳಿಗಾಗಿ ಮೀಸಲಿಡಬೇಕು. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ತೆಗೆದುಕೊಂಡ ಕ್ರಮಗಳ ಕುರಿತು ವರದಿಯನ್ನು ನಿಯಮಿತವಾಗಿ ಆಯೋಗಕ್ಕೆ ಸಲ್ಲಿಸಬೇಕು ಎಂದು ಅವರು ಸೂಚನೆಗಳನ್ನು ನೀಡಿದರು.
ಅಧಿಕಾರಿಗಳು ಕೇವಲ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುವು ದನ್ನು ಗುರಿಯಾಗಿಸದೆ ಬಾಲ ಕಾರ್ಮಿಕರ ಕುಟುಂಬದ ಆರ್ಥಿಕ ಪರಿಸ್ಥಿತಿ ಯನ್ನು ಅವಲೋಕಿಸಿ ಆ ಕುಟುಂಬದ ಸಮಗ್ರ ಪುನರ್ವಸತಿಗೆ ಆದ್ಯತೆ ನೀಡಿ ಅವರ ಸಬಲೀಕರಣಕ್ಕೆ ಒತ್ತು ನೀಡಬೇಕು. ಸದೃಢ ಕುಟುಂಬದಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಂಡು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯು ಇತರರಿಗೆ ಮಾದರಿಯಾ ಗಬೇಕು ಎಂದರು.
ರಕ್ಷಿಸಲಾದ ಬಾಲ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು ಮಕ್ಕಳ ನಾಪತ್ತೆ ಪ್ರಕರಣಗಳನ್ನು ಶಿಕ್ಷಣ ಮತ್ತು ಕಾರ್ಮಿಕ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದರು.
ಜಿಲ್ಲೆಯ 155 ಗ್ರಾಮ ಪಂಚಾಯತಿಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಮುಕ್ತ ಗ್ರಾಮಗಳನ್ನು ಗುರುತಿಸಿ ಅಂತಹ ಗ್ರಾಮಗಳಿಗೆ ಪ್ರಮಾಣ ಪತ್ರ ನೀಡಬೇಕು. ಶಾಲೆ-ಕಾಲೇಜುಗಳಲ್ಲಿ ಚರ್ಚಾ ಕೂಟ, ಸ್ಪರ್ಧೆಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಬೇಕು. ಮನೋರಂಜನಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಕ್ಕಳ ಮಾಹಿತಿ ಕಲೆ ಹಾಕಿ ಮಕ್ಕಳು ಕಾನೂನು ರೀತ್ಯಾ ನಟಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸ ಬೇಕು. ಮಕ್ಕಳ ಹಕ್ಕುಗಳ ಮಾಸಾಚರಣೆ ಅಭಿಯಾನಗಳನ್ನು ಕೈಗೊಳ್ಳಬೇಕು. ವಿವಿಧ ಇಲಾಖೆಗಳ ಜೊತೆ ಸೇರಿ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕಿ ಅಮೃತ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ತಾಲೂಕು ಮಟ್ಟದ ಕಾರ್ಮಿಕ ಅಧಿಕಾರಿಗಳು ಉಪಸ್ಥಿತರಿದ್ದರು.