ಶಿಕ್ಷಣದಿಂದ ವ್ಯಕ್ತಿತ್ವ ವಿಕಸನಗೊಳ್ಳಬೇಕು: ವಿ ಸುನಿಲ್ ಕುಮಾರ್
ಕಾರ್ಕಳ : ಶಿಕ್ಷಣದಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳಬೇಕು. ವ್ಯಕ್ತಿತ್ವ ವಿಕಸನಗೊಳ್ಳದ ಶಿಕ್ಷಣ ಶಿಕ್ಷಣವಲ್ಲ. ಸಚ್ಚಾರಿತ್ರ್ಯ ಶಿಕ್ಷಣದಿಂದ ದೊರೆಯುತ್ತದೆ. ಅಂತಹ ಶಿಕ್ಷಣ ಎಸ್.ವಿ.ಟಿ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರೀತಿಯಲ್ಲಿ ದೊರೆಯುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ ಸುನಿಲ್ ಕುಮಾರ್ ಹೇಳಿದರು.
ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ಸುವರ್ಣ ಸಂಭ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕು ಎಂಬ ಚಿಂತನೆಯೊಂದಿಗೆ ಎಸ್ ವಿ ಟಿ ವಿದ್ಯಾ ಸಂಸ್ಥೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಕಿದ ಹಿರಿಯರ ಕಲ್ಪನೆಯಿಂದಾಗಿ ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾರ್ಜನೆಯನ್ನು ಮಾಡಿ ಒಳ್ಳೆಯ ರೀತಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವಂತಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವಸ್ಥಾನ ಕಾರ್ಕಳದ ಒಂದನೇ ಮೊಕ್ತೇಸರಾದ ಕೆ. ಜಯರಾಮ ಪ್ರಭು ವಹಿಸಿದ್ದರು.
ಎಸ್ ವಿ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಕೆ ಪಿ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ ಎಸ್ .ವಿ.ಟಿ ವಿದ್ಯಾ ಸಂಸ್ಥೆಗಳು ಬೆಳೆದು ಬಂದ ರೀತಿಯನ್ನು ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ಇಂಟರ್ ನ್ಯಾಷನಲ್ ಫೈನಾನ್ಶಿಯಲ್ ಎಡ್ವೈಸರ್ ವೈ. ಮೋಹನ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್ ವಿ ಎಜ್ಯುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ಐ. ರವೀಂದ್ರನಾಥ ಪೈ, ಪುರಸಭೆಯ ಸದಸ್ಯರಾದ ಲಕ್ಷ್ಮೀ ನಾರಾಯಣ ಮಲ್ಯ, ಪೂರ್ವ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷೆಯಾದ ಉಷಾ ಜೆ. ಶೆಣೈ, ಅಧ್ಯಕ್ಷೆ ಮಾಲತಿ ಎಂ , ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಉಷಾ ನಾಯಕ್, ಆಂಗ್ಲ ಮಾಧ್ಯಮ ಮುಖ್ಯೋಪಾಧ್ಯಾಯರಾದ ಮಾಲಿನಿ ಕೆ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಾನಕೀನಾಥ ಎಂ. ಉಪಸ್ಥಿತರಿದ್ದರು.
ಅಧ್ಯಾಪಕ ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮದಾಸ ಪ್ರಭು ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಯೋಗೇಂದ್ರ ನಾಯಕ್ ವಂದಿಸಿದರು.