ಸಂಸ್ಕಾರ -ನಂಬಿಕೆ-ಆಚರಣೆಗಳ ಬಣ್ಣ ಸಮ್ಮಿಲನ ಚಿತ್ರಕಲಾ ಪ್ರದರ್ಶನ ಉದ್ಘಾಟನೆ
ಕುಂದಾಪುರ, ಡಿ.24: ಶಾಲೆಗಳಲ್ಲಿ ಮಕ್ಕಳಿಗೆ ಚಿತ್ರಕಲೆಯನ್ನು ಸ್ಪೂರ್ತಿಯಾಗಿ ಕಲಿಸಬಹುದು. ಆದರೆ ಈ ಕಲೆಯಲ್ಲಿ ಪರಿಣತಿಯನ್ನು ಪಡೆಯಲು ತರಬೇತು ದಾರರ ಅಗತ್ಯವಿದೆ. ಎಂದು ನಿವೃತ್ತ ಪ್ರಾಂಶುಪಾಲೆ ಚಿತ್ರಾ ಕಾರಂತ್ ಹೇಳಿದ್ದಾರೆ.
ತ್ರಿವರ್ಣ ಕಲಾ ಕೇಂದ್ರದ ವತಿಯಿಂದ ಕುಂದಾಪುರ ಸುಪ್ರಭಾ ಕಾಂಪ್ಲೆಕ್ಸ್‌ನ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ಸಂಸ್ಕಾರ - ನಂಬಿಕೆ ಮತ್ತು ಆಚರಣೆಗಳ ಬಣ್ಣ ಸಮ್ಮಿಲನ ಚಿತ್ರಕಲಾ ಪ್ರದರ್ಶನ ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯಿನಿ ಶಶಿಕಲಾ ಬಿಜೂರು ಮಾತನಾಡಿ, ನಾವೆಲ್ಲರೂ ಕೇವಲ ನಾಗರೀಕರಾಗದೇ ಸಂಸ್ಕಾರಯುತ ನಾಗರೀಕರಾಗುವುದು ಬಹಳ ಮುಖ್ಯ. ಅದಕ್ಕೆ ಚಿತ್ರಕಲೆಯೇ ಪ್ರೇರಣೆ. ಯಾವುದೇ ಕಲೆಯಲ್ಲಿ ಯಶಸ್ಸು ಗಳಿಸಲು ಕರ್ತವ್ಯ, ಶಿಸ್ತು, ಭಕ್ತಿ, ವಿವೇಚನೆ ಹಾಗೂ ದೃಢ ನಿರ್ಧಾರ ಬಹಳ ಮುಖ್ಯ ಎಂದು ತಿಳಿಸಿದರು.
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಹಾಗೂ ಮಣಿಪಾಲ್ ಡಾಟ್‌ನೆಟ್ ನಿರ್ದೇಶಕ ನಾಗರಾಜ ಕಟೀಲ್ ಶುಭ ಹಾರೈಸಿದರು. ತ್ರಿವರ್ಣ ಕಲಾ ಕೇಂದ್ರದ ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾ ಪ್ರಸ್ತಾವಿಕವಾಗಿ ಮಾತನಾಡಿದರು.
ತ್ರಿವರ್ಣ ಕಲಾ ಕೇಂದ್ರದ ವಿದ್ಯಾರ್ಥಿನಿ ಕೃತಿ ದೇವಾಡಿಗ ಸ್ವಾಗತಿಸಿ, ಸುಧಿಕ್ಷಾ ಶೇರೆಗಾರ್ ವಂದಿಸಿದರು. ಸುನಿಧಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ತ್ರಿವರ್ಣ ಕಲಾ ಕೇಂದ್ರದ 39 ವಿದ್ಯಾರ್ಥಿಗಳು ಸಂಸ್ಕಾರ ವಿಷಯದ ಕುರಿತಂತೆ ರಚಿಸಿರುವ ವಿವಿಧ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಡಿ.25ರವರೆಗೆ ಈ ಚಿತ್ರಕಲಾ ಪ್ರದರ್ಶನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.