ಪರಿಸರ ಉಳಿಯಲು ಸಾಮಾಜಿಕ ಕಾಳಜಿ ಅತೀ ಮುಖ್ಯ: ಪಿ.ಶ್ರೀಧರ್
ಕುಂದಾಪುರ, ಡಿ.24: ಪರಿಸರ ಉಳಿಯಬೇಕಾದರೆ ನಮ್ಮಲ್ಲಿ ಸಾಮಾಜಿಕ ಪರಿಸರದ ಕಾಳಜಿ ಅತೀ ಮುಖ್ಯ. ಸಕಲ ಜೀವ ರಾಶಿಗಳಿಗೂ ಪರಿಸರ ಬೇಕಾಗಿದೆ. ಆದರೆ ನಮ್ಮ ಸ್ವಾರ್ಥಕ್ಕೆ ಪರಿಸರ ನಾಶ ಆಗುತ್ತಿದೆ ಎಂದು ಮಂಗಳೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಹೇಳಿದ್ದಾರೆ.
ಮಾಜಿ ಶಾಸಕ, ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅವರ 89ನೇ ಜನುಮ ದಿನದ ಪ್ರಯುಕ್ತ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ 89 ವಿವಿಧ ಜಾತಿಯ ಗಿಡಗಳನ್ನು ನೆಟ್ಟಿರುವ ’ಅಮೃತ ವನ’ವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೆಲವೊಂದು ಗಿಡ-ಮರಗಳು ಅಳಿವಿನಂಚಿನಲ್ಲಿವೆ. ಪ್ರತಿಯೊಂದು ಗಿಡ- ಮರಗಳಿಗೂ ತನ್ನದೇ ವೈಶಿಷ್ಟ್ಯವಿದೆ. ಅವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಪರಿಸರವನ್ನು ನಾವು ಪ್ರೀತಿಸಿದರೆ ಅದು ನಮ್ಮನ್ನು ಖಂಡಿತ ಕಾಪಾಡುತ್ತದೆ ಎಂದು ಅವರು ತಿಳಿಸಿದರು.
ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಗಿಡ- ಮರಗಳನ್ನು ಉಳಿಸಿ, ಬೆಳೆಸುವುದಕ್ಕೆ ನಾವರೆಲ್ಲರೂ ಪ್ರಥಮ ಪ್ರಾಶಸ್ತಯ ಕೊಡಬೇ ಕಾಗಿದೆ. ನೆಟ್ಟ ಗಿಡಗಳನ್ನು ಉಳಿಸುವುದು ಕರ್ತವ್ಯ. ನೆಟ್ಟ ಗಿಡಗಳನ್ನು ಉಳಿಸದೇ ಇರುವುದು ರಾಷ್ಟ್ರೀಯ ನಷ್ಟ. ನಾವು ಅಭಿವೃದ್ಧಿ ಹೆಸರಲ್ಲಿ ಕಾಡಿನ ಸಂಪತ್ತನ್ನು ನಾಶ ಮಾಡುತ್ತಿರುವುದ ರಿಂದ ಕಾಡು ಪ್ರಾಣಿಗಳು ನಾಡಿಗೆ ಬರುವಂತಾಗಿದೆ. ಅದನ್ನು ಮತ್ತೆ ಸರಿಪಡಿಸ ಬೇಕಾದರೆ ಇಂತಹ ಕಾರ್ಯ ಮಾಡಬೇಕಾಗಿದೆ ಮಕ್ಕಳಲ್ಲಿ ಪರಿಸರ ಪ್ರೀತಿಯನ್ನು ಬೆಳೆಸಬೇಕಾ ಗಿದೆ. ಇದರಿಂದ ಎಲ್ಲ ಹಾವಳಿಗಳು ಕಡಿಮೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾ ಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್. ಶೆಟ್ಟಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ರಾಮರತನ್ ಹೆಗ್ಡೆ, ರಾಮಕಿಶನ್ ಹೆಗ್ಡೆ, ಪ್ರೀತಮ್ ಎಸ್.ರೈ, ಗುರುಕುಲ ಪಬ್ಲಿಕ್ ಸ್ಕೂಲ್ ವಿಶ್ವಸ್ಥ ಮಂಡಳಿ ಸದಸ್ಯ ರಾಜೇಶ್ ಕೆ.ಸಿ, ಪ್ರಾಂಶುಪಾಲ ಮೋಹನ್ ಕೆ., ಹವ್ಯಾಸಿ ಸಸ್ಯ ಸಂರಕ್ಷಕ ಮಾಧವ ಉಳ್ಳಾಲ್, ಸಂಸ್ಥೆಯ ಶಿಕ್ಷಕರು, ಅಪ್ಪಣ್ಣ ಹೆಗ್ಡೆ ಕುಟುಂಬಸ್ಥರು ಉಪಸ್ಥಿತರಿದ್ದರು.