×
Ad

ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಸಂಸ್ಕೃತಿ ಉತ್ಸವಕ್ಕೆ ಚಾಲನೆ: ಕಾಸರಗೋಡು ಚಿನ್ನಗೆ ಶಾರದಾ ಕೃಷ್ಣ ಪುರಸ್ಕಾರ ಪ್ರದಾನ

Update: 2024-01-23 21:22 IST

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಎಂಜಿಎಂ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ ಎರಡು ದಿನಗಳ ಸಂಸ್ಕೃತಿ ಉತ್ಸವವನ್ನು ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಮಂಗಳವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗಡಿನಾಡು ಕನ್ನಡದ ಕಲಾವಿದ ಕಾಸರಗೋಡು ಚಿನ್ನಾ ಅವರಿಗೆ ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಪ್ರಾಯೋಜಿತ ‘ಶಾರದಾ ಕೃಷ್ಣ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾಸರಗೋಡು ಚಿನ್ನ, ನನ್ನ ರಂಗ, ಸಾಹಿತ್ಯ ಸಾಧನೆ ಹಿಂದಿನ ಬಹುಪಾಲು ಶ್ರೇಯಸ್ಸು ಉಡುಪಿ ಮಣ್ಣಿಗೆ ಸಲ್ಲಬೇಕು. ಹುಟ್ಟಿದ ನೆಲ ಕಾಸರಗೋಡು ಕನ್ನಡಕ್ಕಾಗಿ ಹೋರಾಡುವ ಭಾವ ಬೆಳೆಸಿತು. ಭಾಷಾವಾರು ಪ್ರಾಂತ್ಯ ವೇಳೆ ಅಧಿಕಾರಿಗಳ ತಪ್ಪಿನಿಂದ ಕಾಸರಗೋಡು ಕೇರಳ ಸೇರ್ಪಡೆ ಯಾಗಬೇಕಾಯಿತು. ಕಾಸರಗೋಡು ಮಣ್ಣು ಈಗಲು ಕನ್ನಡದ ಮಣ್ಣು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ವಹಿಸಿದ್ದರು. ಶ್ರೀರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ವಿಶ್ವಸ್ಥ ಎಂ.ಸೂರ್ಯನಾರಾಯಣ ಅಡಿಗ, ಸಂಸ್ಕೃತಿ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಸದಾನಂದ ಶೆಣೈ, ಉದ್ಯಮಿ ಸುಗುಣ ಶಂಕರ್ ಸುವರ್ಣ, ಪ್ರತಿಷ್ಠಾನದ ಗೌರವ ಅಧ್ಯಕ್ಷ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಶಾರದಾಕೃಷ್ಣ ಪುರಸ್ಕಾರ ಸಮಿತಿ ಸಂಚಾಲಕ ವಿವೇಕಾನಂದ ಎನ್. ಉಪಸ್ಥಿತರಿದ್ದರು.

ಮಂಗಳೂರು ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ವಿಘ್ನೇಶ್ವರ್ ಅಡಿಗ ಸ್ವಾಗತಿಸಿದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್ ಪಿ ಪ್ರಸ್ತಾವಿಕವಾಗಿ ಮಾತನಾಡಿದರು. ರಾಮಾಂಜಿ ಸಮ್ಮಾನ ಪತ್ರ ವಾಚಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News