×
Ad

ಮಡಿವಾಳ ಸಮುದಾಯಕ್ಕೆ ನ್ಯಾಯ ಕಲ್ಪಿಸುವುದು ಎಲ್ಲರ ಕರ್ತವ್ಯ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Update: 2024-01-28 17:48 IST

ಉಡುಪಿ, ಜ.28: ಸತ್ಯ, ನಿಷ್ಠೆ, ಧರ್ಮ, ಪ್ರಾಮಾಣಿಕತೆಯನ್ನು ಮೈಗೂಡಿಸಿ ಕೊಂಡಿರುವ ಮಡಿವಾಳ ಸಮುದಾಯವು ಕಷ್ಟದಲ್ಲಿ ಬದುಕನ್ನು ಕಟ್ಟಿಕೊಂಡಿದೆ. ಸಮಾಜದಲ್ಲಿ ನಾನಾ ಪರೀಕ್ಷೆಗೆ ಒಳಾಗಿದ್ದ ಈ ಸಮುದಾಯಕ್ಕೆ ನ್ಯಾಯ ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭರವಸೆ ನೀಡಿದ್ದಾರೆ.

ಶ್ರೀರಜಕ ಯಾನೆ ಮಡಿವಾಳ ಸಂಘ, ಉಡುಪಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಹಯೋಗದೊಂದಿಗೆ ಮಣಿಪಾಲ ಟ್ಯಾಪ್ಮಿ ರಸ್ತೆಯ ಸಂಘದ ಸ್ವಂತ ಜಾಗದಲ್ಲಿ ಮಡಿವಾಳರ ಕುಲಗುರು ಮಾಚಿದೇವರ ಜನ್ಮ ಜಯಂತಿಯ ಪ್ರಯುಕ್ತ ರವಿವಾರ ನಡೆದ ಮಡಿವಾಳ ಸಂಗಮ-2024 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಮಡಿವಾಳರು ಯಾರಿಗೂ ಅನ್ಯಾಯ, ಮೋಸ ಮಾಡಿಲ್ಲ. ಜಾತಿ, ಮತ, ಪಂಥವನ್ನು ಮೀರಿದ ಬಂಧುತ್ವ ಮಡಿವಾಳ ಸಮುದಾಯದಲ್ಲಿದೆ. ಮಾಚಿ ದೇವರ ವಚನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತಂದು ಮನೆ ಮನೆಗೆ ಮುಟ್ಟಿಸಬೇಕು. ಆಗ ಸರಕಾರವೇ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಈ ಪುಸತಿಕಕ್ಕೆ ಬೇಕಾದ ಸರ್ವ ರೀತಿಯ ಸಹಕಾರವನ್ನು ನಾನು ಮಾಡುವುದಾಗಿ ಭರವಸೆ ನೀಡಿದರು.

ಶಾಸಕ ಯಶಪಾಲ್ ಎ.ಸುವರ್ಣ ಮಾತನಾಡಿ, ರಾಜ್ಯದಲ್ಲಿ 209 ಜಾತಿಗಳು ಹಿಂದುಳಿದ ವರ್ಗದಲ್ಲಿದ್ದು, ಸಮಾಜದ ಎಲ್ಲಾ ಜಾತಿಗೂ ನ್ಯಾಯ ನೀಡುವ ಕೆಲಸ ಆಗಬೇಕಾಗಿದೆ. ಮಡಿವಾಳ ಸಮುದಾಯದ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಮಡಿವಾಳ ಸಮುದಾಯದ ವಿದ್ಯಾರ್ಥಿ ಭವನ, ಸಮುದಾಯ ಭವನ ನಿರ್ಮಾಣಕ್ಕೆ ಬೇಕಾದ ಅನುದಾನ ಕೊಡಿಸುವುದು ನಮ್ಮ ಜವಾಬ್ದಾರಿ. ಈ ಬಗ್ಗೆ ಸಿಎಂ ಬಳಿ ಸಂಘದ ನಿಯೋಗ ಕರೆದುಕೊಂಡು ಹೋಗಿ ಹೆಚ್ಚಿನ ಅನುದಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮವನ್ನು ದೊಡ್ಡಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮ ದರ್ಶಿ ರಮಾನಂದ ಗುರೂಜಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ಶ್ರೀರಜಕ ಯಾನೆ ಮಡಿವಾಳದ ಸಂಘದ ಅಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ಸಾಧಕರನ್ನು ಸನ್ಮಾನಿಸ ಲಾಯಿತು. ನ್ಯಾಯವಾದಿ ಆನಂದ್ ಮಡಿವಾಳ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್.ಕುಂದರ್ ಮಾತನಾಡಿದರು.

ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್, ನಗರಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಬಡಗಬೆಟ್ಟು ಗ್ರಾಪಂ. ಅಧ್ಯಕ್ಷ ಕೇಶವ ಕೋಟ್ಯಾನ್, ಉದ್ಯಮಿಗಳಾದ ಕೃಷ್ಣ ಆರ್.ಸಾಲಿಯಾನ್, ಉಮೇಶ್ ಬೈಲೂರು, ಕೃಷ್ಣ ಎಂ.ಸಾಲಿಯಾನ್, ಶ್ರೀಕ್ಷೇತ್ರ ಅಲಂಗಾರು ಧರ್ಮದರ್ಶಿ ಸುಧಾಕರ್ ಮಡಿವಾಳ ಪಡುಬಿದ್ರಿ, ಉದ್ಯಮಿ ಜಗದೀಶ್ವರ್ ಕುಕ್ಕಿಕಟ್ಟೆ, ಕರುಣಾಕರ್ ಬಂಗೇರ ಅಂಬಾಗಿಲು, ಶಂಕರ್ ಜಿ.ಕುಂದರ್, ಉಮೇಶ್ ಡಿ. ಸಾಲಿಯಾನ್, ಮಹಿಳಾ ಘಟಕಾಧ್ಯಕ್ಷೆ ಸುಜಾತ ನಾರಾಯಣ್ ಸರಳೇಬೆಟ್ಟು, ಯುವ ಘಟಕ ಉಡುಪಿ ಅಧ್ಯಕ್ಷ ಶ್ರೀಕಾಂತ್ ಕಡಿಯಾಳಿ ಉಪಸ್ಥಿತರಿದ್ದರು.

ಗಣೇಶ್ ಎಲ್ಲೂರು ಹಾಗೂ ಸಂತೋಷ್ ಪಿಲ್ಲಾರ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಸ್ಪರ್ಧೆ, ಮಾಚಿದೇವರ ಚಿತ್ರ ಬಿಡಿಸುವ ಸ್ಪರ್ಧೆ, ಬಹುಮಾನ ವಿತರಣೆ, ಮನೋರಂಜನಾ ಕಾರ್ಯಕ್ರಮ ನಡೆಯಿತು.

‘ಮಾಚಿದೇವರ ವಚನ ಪಠ್ಯದಲ್ಲಿ ಅಳವಡಿಕೆಯಾಗಿಲ್ಲ‘

ಮಾಚಿದೇವರು ಕ್ರಾಂತಿ ಪುರುಷರು. ಬಸವಣ್ಣ ಅವರ ಸರಿಸಮಾನವಾಗಿರುವ ಮಾಚಿದೇವರ ವಚನಗಳನ್ನು ಪಠ್ಯದಲ್ಲಿ ಅಳವಡಿಸುವ ಕಾರ್ಯ ಈವರೆಗೆ ಸಾಧ್ಯವಾಗಲಿಲ್ಲ. ಪ್ರಾಥಮಿಕ ಪಠ್ಯ ಪುಸ್ತಕದಲ್ಲಿ ಮಾಚಿದೇವರ ವಚನಗಳನ್ನು ಅಳವಡಿಸುವುದಕ್ಕೆ ಪ್ರಯತ್ನ ನಡೆಸಿದ್ದು, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸಮುದಾಯ ಮುಖಂಡ ನ್ಯಾಯವಾದಿ ಆನಂದ್ ಮಡಿವಾಳ ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಮಾತನಾಡಿ, ಮಣಿಪಾಲ ಟ್ಯಾಪ್ಮಿ ಬಳಿ ಸಮೀಪ ಸಂಘಕ್ಕೆ ಸುಮಾರು 50 ಸೆಂಟ್ಸ್ ಜಾಗ ಮಂಜೂರಾಗಿದ್ದು, ಸಮುದಾಯದ ವಿದ್ಯಾರ್ಥಿಗಳ ವಿದ್ಯಾ ರ್ಜನೆಗೆ ಅನುಕೂಲವಾಗುವಂತೆ ವಿದ್ಯಾರ್ಥಿ ಭವನ ಹಾಗೂ ಸಮುದಾಯ ಭವನ ನಿರ್ಮಾಣದ ಸಂಕಲ್ಪವಿದೆ. ಸಮಾಜದಲ್ಲಿ ಇತರೆ ಸಮಾಜಕ್ಕೆ ಸರಿಸಮಾನವಾಗಿ ಬೆಳೆಯುವ ನಿಟ್ಟಿನಲ್ಲಿ ಸರಕಾರ, ಜನಪ್ರತಿನಿಧಿಗಳು ಬೆಂಬಲಕ್ಕೆ ನಿಲ್ಲಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News