×
Ad

ಗಾಂಧೀಜಿ ಪ್ರಸ್ತುತತೆಯನ್ನು ಆಪ್ರಸ್ತುತಗೊಳಿಸುವ ಷಡ್ಯಂತ್ರ: ಡಾ.ನಿಕೇತನ

Update: 2024-01-31 18:42 IST

ಉಡುಪಿ: ಗಾಂಧೀಜಿಯವರು ಪ್ರಸ್ತುತರಾಗಬೇಕಾದ ಇಂದಿನ ದಿನಮಾನದಲ್ಲಿ ಅವರನ್ನು ಅಪ್ರಸ್ತುತರಾಗಿಸುವ ಷಡ್ಯಂತ್ರ ವೊಂದು ಕೆಲ ಜನರಿಂದ, ಕೆಲ ಮಾಧ್ಯಮಗಳಿಂದ ಜರಗುತ್ತಿದೆ. ಗಾಂಧಿ ಚಿಂತನೆಯನ್ನು ಪ್ರಚಾರಗೊಳಿಸುವುದರ ಮೂಲಕ ಇದನ್ನು ವಿಫಲಗೊಳಿಸಬೇಕಾಗಿದೆ ಎಂದು ಉಡುಪಿ ಅಜ್ಜರಕಾಡು ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಡಾ.ನಿಕೇತನ ಹೇಳಿದ್ದಾರೆ.

ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ ಸುವರ್ಣ ಸಂಭ್ರಮ ವರ್ಷದ ಜನವರಿ ತಿಂಗಳ ಕಾರ್ಯಕ್ರಮವಾಗಿ ಹುತಾತ್ಮ ದಿನ ದಂದು ಉದ್ಯಾವರ ಸ್ಮಶಾನದಲ್ಲಿ ಮಂಗಳವಾರ ಆಯೋಜಿಸಲಾದ ನಾದ ಮಣಿನಾಲ್ಕೂರು ಅವರ ಕತ್ತಲಹಾಡು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಗಾಂಧೀಜಿ ಹುತಾತ್ಮರಾದ ದಿನ ನಾವು ಅವರ ಚಿಂತನೆ ಗಳೇನು ಅವರ ಹಿಂದುತ್ವ ಎಂತಹ ಬಹುತ್ವವನ್ನು ಕಲ್ಪನೆಯನ್ನು ಹೊಂದಿತ್ತು ಎಂಬುದನ್ನು ಮನನ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿದ್ದೇವೆ. ಈ ನಿಟ್ಟಿನಲ್ಲಿ ನಿತ್ಯವೂ ಚಿಂತನೆ ಯನ್ನು ಮಾಡುತ್ತ ಅದರ ಪ್ರಸ್ತುತತೆಯನ್ನು ಮನಗಂಡು ಅದನ್ನು ರೂಡಿಸಿಕೊಳ್ಳುವ ಅಗತ್ಯತೆ ಮತ್ತು ಅನಿವಾರ್ಯತೆ ಈ ದಿನಮಾನದಲ್ಲಿದೆ ಎಂದರು.

ಗಾಂಧೀಜಿಯವರ ಹಿಂದೂ ಧರ್ಮದ ಕಲ್ಪನೆ ಎಲ್ಲ ಧರ್ಮದ ದೇವರನ್ನು ಎಲ್ಲ ಸಂಸ್ಕೃತಿಯನ್ನು ಒಳಗೊಳ್ಳುವ ಬಹುತ್ವದ ಕಲ್ಪನೆಯಾಗಿದೆ. ಗಾಂಧಿ ಸಿದ್ಧಾಂತದ ಒಳಗೆ ಅಂತರಂಗದ ಕ್ರಾಂತಿ ಇತ್ತು. ಅವರ ಜೀವನ ಚರಿತ್ರೆಯೇ ಸತ್ಯಾನ್ವೇಷಣೆ. ಅವರ ಬದುಕು ಒಂದು ಪ್ರಯೋಗಶಾಲೆ. ನಾವು ಸಾಮಾಜಿಕ ವಾಗಿ ಮಾಡುವ ಕ್ರಾಂತಿ ಮೊದಲು ಅಂತರಂಗದಲ್ಲಿ ಹುಟ್ಟಬೇಕು. ಇಲ್ಲವಾದಲ್ಲಿ ಕ್ರಾಂತಿ ವಿಫಲವಾಗುತ್ತದೆ ಎಂದ ಗಾಂಧೀಜಿ ತತ್ವ ನಮ್ಮನ್ನು ಸದಾ ಎಚ್ಚರಿಸುತ್ತಿದೆ ಎಂದು ಅವರು ತಿಳಿಸಿದರು.

ವೇದಿಕೆಯಲ್ಲಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಮಾಲತಿ ಸಂದೀಪ್, ಸಾರ್ವಜನಿಕ ಹಿಂದೂ ರುದ್ರ ಭೂಮಿ ನಿರ್ವಹಣಾ ಪ್ರತಿಷ್ಠಾನ ಅಧ್ಯಕ್ಷ ಗಿರೀಶ್ ಕುಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ತಿಲಕ್‌ರಾಜ್ ಸಾಲಿಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ವಂದಿಸಿದರು. ಮಾಜಿ ಅಧ್ಯಕ್ಷ ರಿಯಾಝ್ ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ನಾದ ಮಣಿನಾಲ್ಕೂರು ಅವರ ಶಾಂತಿ ಪ್ರೀತಿ ಸೌಹಾರ್ದ ತೆ‌ಯಿಂದ ಕೂಡಿದ ಕತ್ತಲು ಹಾಡು ಕಾರ್ಯಕ್ರಮ ಜರಗಿತು.

‘ಗಾಂಧೀಜಿಯವರ ರಾಮ ರಾಜ್ಯದ ಹಿಂದಿರುವ ಕಲ್ಪನೆ ಶಾಂತಿ- ಪ್ರೀತಿ ಅಹಿಂಸೆಯಾಗಿದೆ. ಗಾಂಧೀಜಿಯವರು ಪ್ರತಿಪಾದಿ ಸಿದ ಬಹುತ್ವ ಭಾರತದ ಕಲ್ಪನೆ, ಗ್ರಾಮ ಸ್ವರಾಜ್ಯ, ಅಸ್ಪೃಶ್ಯತೆ ನಿವಾರಣೆ, ಅಹಿಂಸೆ ಇದರಿಂದಲೇ ನಾವು ಇಂದಿನ ಎಲ್ಲಾ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದು. ಗಾಂಧೀಜಿ ಯವರ ಜೀವನದ ಬಗ್ಗೆ ಪ್ರಕಟವಾದ ಸಾಹಿತ್ಯ ಜಗತ್ತಿನ ಬೇರೆ ಯಾವ ವ್ಯಕ್ತಿಯ ಬಗ್ಗೆಯೂ ಪ್ರಕಟವಾಗಿಲ್ಲ. ಗಾಂಧಿ ಹತ್ಯೆಯಾದ ದಿನ ನೆಹರೂರವರು ಇಂದು ದೇಶ ಕತ್ತಲು ತುಂಬಿದೆ ಎಂದಿರುವರು. ಈ ಕತ್ತಲೆಯನ್ನ ಓಡಿಸುವುದಕ್ಕೆ ಗಾಂಧಿ ಚಿಂತನೆಗಳು ಮುನ್ನಲೆಗೆ ಬರಲಿ’

-ಡಾ.ನಿಕೇತನ, ಪ್ರಾಧ್ಯಾಪಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News