×
Ad

ಮೂಡುಬೆಳ್ಳೆ: ಹಕ್ಕು ಪತ್ರ ದೊರೆಯದ ದಲಿತರ ಮನೆಗಳಿಗೆ ದ.ಸಂ.ಸ. ನಿಯೋಗ ಭೇಟಿ

Update: 2024-10-27 21:55 IST

ಉಡುಪಿ: ಕಾಪು ತಾಲೂಕಿನ ಮೂಡುಬೆಳ್ಳೆ ಸಮೀಪದ ಕಟ್ಟಿಂಗೇರಿಯಲ್ಲಿ ಸುಮಾರು 40 ವರ್ಷಗಳಿಂದ ವಾಸವಾಗಿದ್ದ ನಾಲ್ಕೈದು ದಲಿತ ಕುಟುಂಬಗಳಿಗೆ ಹಕ್ಕುಪತ್ರ ಸಿಗದ ಮತ್ತು ವಿದ್ಯುತ್ ಸಂಪರ್ಕಕ್ಕೆ ನಿರಪೇಕ್ಷಣಾ ಪತ್ರ ನಿರಾಕರಿಸಿದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ನಿಯೋಗ ಇಂದು ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಪರೀಶೀಲನೆ ನಡೆಸಿತು‌.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ನೇತೃತ್ವದಲ್ಲಿ ನಿಯೋಗವು ಮೂಡುಬೆಳ್ಳೆ ಗ್ರಾಮ ಶಾಖೆಯ ಪದಾಧಿಕಾರಿಗಳೊಂದಿಗೆ ಕಟ್ಟಿಂಗೇರಿಗೆ ಭೇಟಿ ನೀಡಿ, ಸ್ಥಳೀಯರು ಕುಡಿಯುವ ನೀರಿಗೆ ತಡೆಯೊಡ್ಡುತ್ತಿರುವುದು ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿ ಗಳಿರುವ ಮನೆಗಳಿಗೆ ವಿದ್ಯುತ್ ದೀಪದ ಸಂಪರ್ಕಕ್ಕೆ ತಡೆಯೊಡ್ಡಿರುವ ಬಗ್ಗೆ ಕೂಲಂಕಷ ಮಾಹಿತಿ ಪಡೆದುಕೊಂಡಿತು.

ಈ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಜಿಲ್ಲಾ ಸಮಿತಿಯು ಖುದ್ದಾಗಿ ಜಿಲ್ಲಾಧಿಕಾರಿ , ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಅವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿತು.

ನಿಯೋಗದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು , ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ , ಕುಮಾರ್ ಕೋಟ , ಶ್ಯಾಮಸುಂದರ ತೆಕ್ಕಟ್ಟೆ , ಜಿಲ್ಲಾ ವಿಧ್ಯಾರ್ಥಿ ಓಕ್ಕೂಟದ ಸಂಚಾಲಕ ರಾಜೇಂದ್ರ ಮಾಸ್ಟರ್ ಬೆಳ್ಳೆ , ಕಾಪು ತಾಲೂಕು ಸಂಚಾಲಕ ವಿಠಲ ಉಚ್ಚಿಲ , ತಾಲೂಕು ಸಂಘಟನಾ ಸಂಚಾಲಕ ಶಿವರಾಮ ಕಾಪು , ಮೂಡುಬೆಳ್ಳೆ ಗ್ರಾಮ ಶಾಖೆ ಸಂಚಾಲಕ ರಾಘವ ಮೂಡುಬೆಳ್ಳೆ , ಸಂಘಟನಾ ಸಂಚಾಲಕರಾದ ಕೃಷ್ಣ ಬೆಳ್ಳೆ , ಕರುಣಾಕರ ಬೆಳ್ಳೆ , ರಮೇಶ ಬೆಳ್ಳೆ , ಮೊದಲಾದವರು ಉಪಸ್ಥಿತರಿದ್ದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News