ವಿಕಲಚೇತನರ ಸಲಕರಣೆ ಉತ್ಪಾದನೆ, ದುರಸ್ತಿ ಕೇಂದ್ರಕ್ಕೆ ಪ್ರಸ್ತಾಪ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಜ.6: ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ನೀಡುವ ವೀಲ್‌ಚೇಯರ್, ಹಿಯರಿಂಗ್ ಏಡ್ ಸೇರಿದಂತೆ ವಿವಿಧ ಸಾಧನ ಸಲಕರಣೆಗಳ ಉತ್ಪಾದನೆ ಮತ್ತು ದುರಸ್ತಿ ಮಾಡುವ ಕೇಂದ್ರವನ್ನು ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರಸ್ತಾಪ ಸಲ್ಲಿಸಿ ಶೀಘ್ರ ಕ್ರಮ ಕೈಗೊಳ್ಳಲು ಪ್ರಯತ್ನ ಮಾಡಲಾಗುವುದು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗ ದೊಂದಿಗೆ ಅಲಿಂಕೋ ಸಂಸ್ಥೆ ವತಿಯಿಂದ ಅಡಿಪ್ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಮಣಿಪಾಲ ರಜ ತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ವಿವಿಧ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಲಕರಣೆಗಳನ್ನು ನೀಡುವ ಮೂಲಕ ವಿಕಲಚೇತನರಿಗೆ ಶಕ್ತಿ ತುಂಬುವ ಹಾಗೂ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಇದೇ ರೀತಿಯ ಸಲಕರಣೆ ವಿತರಣೆಗೆ ಕಳೆದ ವರ್ಷ ದೇಶದಲ್ಲಿ 51ಕೋಟಿ ರೂ. ಅನುದಾನ ವನ್ನು ಹಂಚಲಾಗಿದೆ. ಈ ಗುಣಮಟ್ಟದ ಸಲಕರಣೆಗಳಿಂದ ವಿಕಲಚೇತನರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈ ಸಲಕರಣೆಗಳು ಹಾಳಾದರೆ ಅದರ ಜವಾಬ್ಧಾರಿಯನ್ನು ವಿತರಿಸಿದ ಸಂಸ್ಥೆಯೇ ವಹಿಸಿಕೊಳ್ಳಬೇಕು ಎಂದರು.
ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ಅಲಿಂಕೋ ಸಂಸ್ಥೆಯು ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಪಟ್ಟಿಯನ್ನು ಇಲಾಖೆಯಿಂದ ಪಡೆದುಕೊಂಡು ಜುಲೈ ತಿಂಗಳಲ್ಲಿ ಸರ್ವೆ ನಡೆಸಿದ್ದು, ಅರ್ಹ ವ್ಯಕ್ತಿಗಳಿಗೆ ಬೇಕಾದ ಅಳತೆಯಲ್ಲಿ ಸಲಕರಣೆಗಳನ್ನು ತಯಾರಿಸಿ ಇದೀಗ ವಿತರಿಸುತ್ತಿದೆ. ಜಿಲ್ಲೆಯ 426 ವಿಕಲಚೇತನರಿಗೆ 41.68ಲಕ್ಷ ರೂ. ಮತ್ತು 283 ಹಿರಿಯ ನಾಗರಿಕಗೆ 23ಲಕ್ಷ ರೂ. ಮೌಲ್ಯದ ಸಾಧನ ಸಲಕರಣೆ ವಿತರಿಸ ಲಾಗುತ್ತಿದೆ ಎಂದು ತಿಳಿಸಿದರು.
ಸರಕಾರ ಅರ್ಹರಿಗೆ ಇಂತಹ ಸಲಕರಣೆಗಳನ್ನು ನೀಡುವುದರಿಂದ ವಿಕಲ ಚೇತನರು ಹಾಗೂ ಹಿರಿಯ ನಾಗರಿಕರು ಘನತೆ ಹಾಗೂ ಸ್ವತಂತ್ರವಾಗಿ ತಮ್ಮ ಬದುಕನ್ನು ಮುಂದುವರೆಸಲು ಸಾಧ್ಯವಾಗುತ್ತದೆ. ಅದೇ ರೀತಿ ಈ ಸಲಕರಣೆಗಳ ದುರಸ್ತಿ ಕೇಂದ್ರವು ದ.ಕ. ಜಿಲ್ಲೆಗೆ ಮಂಜೂರಾಗಿದ್ದು, ಅದೇ ರೀತಿ ಉಡುಪಿ ಜಿಲ್ಲೆಗೂ ಇಂತಹ ಕೇಂದ್ರದ ಅಗತ್ಯ ಬಹಳ ಇದೆ. ಇದರಿಂದ ಜಿಲ್ಲೆಯಲ್ಲಿರುವ 13ಸಾವಿರ ವಿಶೇಷ ಚೇತನರಿಗೆ ಅನುಕೂಲವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಎ.ಸುವರ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪ್ರತೀಕ್ ಬಾಯಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡದ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರತ್ನ ಉಪಸ್ಥಿತರಿದ್ದರು.
ಅಲಿಂಕೋ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಎ.ವಿ.ಅಶೋಕ್ ಕುಮಾರ್ ಸ್ವಾಗತಿಸಿದರು. ಡಾ.ಗಣನಾಥ ಎಕ್ಕಾರು ಹಾಗೂ ದೀಪಾ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ. ವಂದಿಸಿದರು.
‘ಮೈಸೂರು ಸ್ಪೀಚ್ ಆ್ಯಂಡ್ ಹಿಯರಿಂಗ್ ಸಂಸ್ಥೆಯವರು ಉಡುಪಿಯ ದಿವ್ಯಾಂಗ ಚೇತನರ ಸಂಸ್ಥೆಯ ಜೊತೆಗೂಡಿ 450 ಅರ್ಹರಿಗೆ ಹಿಯರಿಂಗ್ ಏಡ್‌ನ್ನು ನೀಡಿದೆ. ಈ ರೀತಿಯ ಸಲಕರಣೆಗಳನ್ನು ನೀಡಲು ಈ ಸಂಸ್ಥೆಯಲ್ಲಿ ಯಾವುದೇ ಹಣ ಕಾಸಿನ ಕೊರತೆ ಇಲ್ಲ. ಆದುದರಿಂದ ಅರ್ಹರು ಇಲಾಖೆ ಮೂಲಕ ಅರ್ಜಿ ಸಲ್ಲಿಸಬಹುದು. ಕಿವಿಯ ಸಮಸ್ಯೆ ಇರುವ ಸಣ್ಣ ಮಕ್ಕಳಿಗೆ ಇಂತಹ ಸಲಕರಣೆ ಅಳವಪಡಿಸುವುದರಿಂದ ಮುಂದೆ ಅವರಿಗೆ ಮಾತನಾಡಲು ಅನುಕೂಲವಾಗುತ್ತದೆ’
-ಡಾ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ