×
Ad

ಖ್ಯಾತ ಅರ್ಥಧಾರಿ ಬರೆ ಕೇಶವ ಭಟ್ಟ ನಿಧನ

Update: 2025-01-25 20:05 IST

ಉಡುಪಿ, ಜ.25: ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥಧಾರಿ ಬರೆ ಕೇಶವ ಭಟ್ಟ (84) ಇಂದು ನಿಧನ ಹೊಂದಿದರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಕೇಶವ ಭಟ್ಟರು ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿ ಯಾಗಿ, ಕಲಾ ಸಂಯೋಜಕರಾಗಿ, ಕಲಾವಿಮರ್ಶಕರಾಗಿ, ಲೇಖಕರಾಗಿ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದರು.

ವೃತ್ತಿಯಿಂದ ನಿವೃತ್ತಿಯ ನಂತರ ವಾಸುದೇವ ಸಾಮಗರ ಸಂಯಮಂ ತಂಡದಲ್ಲಿ ಕೆಲವು ವರ್ಷ ತಿರುಗಾಟ ಮಾಡಿದ್ದರು. ಅಪಾರ ಪುರಾಣ ಜ್ಞಾನ, ಭಾವಪೂರ್ಣ ಅರ್ಥಗಾರಿಕೆಯಿಂದ ಕಲಾಭಿಮಾನಿಗಳ ಗೌರವಕ್ಕೆ ಪಾತ್ರರಾಗಿದ್ದರು. ಉಡುಪಿ ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ ದಲ್ಲಿ ಅರ್ಥಧಾರಿಯಾಗಿ, ಅವಲೋಕನಕಾರರಾಗಿ ಸಹಕರಿಸಿದ್ದರು.

ಬರೆ ಕೇಶವ ಭಟಟರು ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಬರೆಯಲ್ಲಿ 1941ರಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ್ದು, ಕೈರಂಗಳ, ವಿಟ್ಲ ಶಾಲೆಗಳಲ್ಲಿ ಓದಿ ಮಂಗಳೂರು ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕ ತರಬೇತಿ ಪಡೆದಿದ್ದರು. ಇವರು ಕೈರಂಗಳ, ಶಿರಂಕಲ್ಲು, ಅಡ್ಯನಡ್ಕ ಶಾಲೆಗಳಲ್ಲಿ ಅದ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಸಣ್ಣಯಬೈಲಿನಲ್ಲಿ ವಾಸವಾಗಿದ್ದ ಕೇಶವ ಭಟ್ಟರಿಗೆ ಹತ್ತು ವರ್ಷಗಳ ಹಿಂದೆ ಯಕ್ಷಗಾನ ಕಲಾರಂಗ ಪೆರ್ಲ ಕೃಷ್ಣಭಟ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News