ಸಂತೆಕಟ್ಟೆ ಮೇಲ್ಸೆತುವೆಗಳಿಗೆ ವಾರದೊಳಗೆ ಡಾಮರೀಕರಣ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಜ.27: ಕಲ್ಯಾಣಪುರ ಸಂತೆಕಟ್ಟೆ ಹಾಗೂ ಅಂಬಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಕಾಮಗಾರಿ ಕುರಿ ತಂತೆ ಪರಿಶೀಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ.ಬ್ರಾಹ್ಮಣ್‌ಕರ್ ಅವರು ಇಂದು ಕಾಮಗಾರಿ ನಡೆಯುವ ಸ್ಥಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಸೂಚನೆಯಂತೆ ಭೇಟಿ ನೀಡಿ ಪರಿಶೀಲಿಸಿದರು.
ಹಿರಿಯ ಅಧಿಕಾರಿಯ ಭೇಟಿಯ ಕುರಿತಂತೆ ಸಂತೆಕಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಂತೆಕಟ್ಟೆ ಕಲ್ಯಾಣಪುರ ಸುರಂಗ ಮಾರ್ಗದ ಕಾಮಗಾರಿಯಲ್ಲಾಗುತ್ತಿರುವ ವಿಳಂಬ ಹಾಗೂ ಲೋಪದ ಕುರಿತಂತೆ ಪ್ರಾದೇಶಿಕ ಅಧಿಕಾರಿಯವರಿಗೆ ಮನದಟ್ಟು ಮಾಡಿದ್ದು, ತುರ್ತಾಗಿ ಒಂದು ವಾರದೊಳಗೆ ಎರಡೂ ಕಡೆಯ ಮೇಲ್ಸೆತುವೆ (ಬಲ ಮತ್ತು ಎಡ)ಯ ಡಾಮರೀಕರಣ ನಡೆಸಿ ಧೂಳಿನಿಂದ ಸಾರ್ವಜನಿಕರಿಗೆ ಮುಕ್ತಿ ನೀಡುವಂತೆ ತಿಳಿಸಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದರು.
ಎಸ್ಪಿ ಹಾಗೂ ಡಿಸಿ ಅವರ ಉಪಸ್ಥಿತಿಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಮೂರು ದಿನದೊಳಗೆ ವಾಹನಗಳು ಸಂಚರಿಸುವ ಎರಡೂ ಕಡೆ ರಸ್ತೆಯ ಡಾಮರೀಕರಣ ಕಾಮಗಾರಿಯನ್ನು ಪ್ರಾರಂಭಿಸಿ ಒಂದು ವಾರದೊಳಗೆ ಮುಗಿಸು ವಂತೆ ಸೂಚಿಸಲಾಗಿದೆ. ಅದೇ ರೀತಿ ಮಾಮೂಲು ಕೆಳಗಿನ ರಸ್ತೆಗೂ ಡಾಮರೀಕರಣ ನಡೆಸಲು ಒಪ್ಪಿಕೊಂಡಿದ್ದಾರೆ. ಇದರಿಂದ ಪ್ರಯಾಣಿಕರಿಗಾಗುವ ಧೂಳಿನ ಸಮಸ್ಯೆ ಒಂದು ವಾರದಲ್ಲಿ ಬಗೆಹರಿಯಲಿದೆ ಎಂದು ಕೋಟ ತಿಳಿಸಿದರು.
ಮೇಲ್ಸೆತುವೆ ಕಾಮಗಾರಿಗೆ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿರುವುದರಿಂದ ಹಾಗೂ ಬಂಡೆಗಳು ಸಿಗುತ್ತಿರುವು ದರಿಂದ ಕಾಲಾವಕಾಶ ಕೇಳಿದ್ದು, ಅದಕ್ಕೆ ನಾವು ಆಕ್ಷೇಪ ಸೂಚಿಸಿಲ್ಲ. ಧೂಳು ಎಳುತ್ತಿರುವ ಎರಡೂ ಕಡೆಗಳ ರಸ್ತೆಗೆ ತಕ್ಷಣ ಡಾಮರೀಕರಣ ಮಾಡುವಂತೆ ನಾವು ತಿಳಿಸಿದ್ದೇವೆ, ಅವರು ಒಪ್ಪಿಕೊಂಡಿದ್ದಾರೆ ಎಂದರು.
ಆರ್‌ಓ ಅವರೇ ಬಂದಿರುವುದರಿಂದ ಅವರ ಮಾತುಗಳನ್ನು ನಾನು ನಂಬಿದ್ದೇವೆ. ಇಲ್ಲದಿದ್ದರೆ ಮುಂದೇನು ಮಾಡ ಬೇಕೆಂಬುದನ್ನು ನಾವು ನಿರ್ಧರಿಸುತ್ತೇವೆ ಎಂಬ ಗಂಭೀರ ಎಚ್ಚರಿಕೆಯನ್ನೂ ನೀಡಿದ್ದೇವೆ. ಮಾತು ಉಳಿಸುಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದರು.
ಅಂಬಲಪಾಡಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲೂ ನಾವು ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸುತ್ತೇವೆ. ಇಂದ್ರಾಳಿಯ 169ಎ ಹೆದ್ದಾರಿ ಇವರ ವ್ಯಾಪ್ತಿಗೆ ಬರುವುದಿಲ್ಲ ಎಂದರು.
ಉಚ್ಚಿಲದಲ್ಲೂ ನಾವು ಸ್ಥಳ ಪರಿಶೀಲನೆ ನಡೆಸಿದ್ದೇವೆ. ಅಪಘಾತಗಳ ತಾಣವೆಂದೇ ಕರೆಯಲಾಗುವ ಉಚ್ಚಿಲದಲ್ಲಿ ಕಳೆದ ಮೂರು ತಿಂಗಳಲ್ಲಿ 90ಕ್ಕೂ ಅಧಿಕ ಅಪಘಾತಗಳಾಗಿದ್ದು, 90-92 ಮಂದಿ ಜೀವ ಹಾನಿಯಾದ ಗಂಭೀರ ಪ್ರಕರಣಗಳಿ ರುವುದರಿಂದ ಅಲ್ಲೂ ಬೇಕಾದ ಮೂಲಭೂತ ಸೌಕರ್ಯ, ರ್ಯಾಂಪ್‌ಗಳ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದೇವೆ. ಆದಷ್ಟು ಬೇಗ ಈ ಸಮಸ್ಯೆ ಪರಿಹಾರ ಮಾಡುವುದು ನಮ್ಮ ಉದ್ದೇಶ ಎಂದರು.
ಎನ್‌ಎಚ್‌ನ ಪ್ರಾದೇಶಿಕ ಅಧಿಕಾರಿ ವಿಲಾಸ್ ಬ್ರಾಹ್ಮಣ್‌ಕರ್ ಮಾತನಾಡಿ. ಸಂಸದರ ಕೋರಿಕೆಯಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಮಸ್ಯೆಗಳಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕೆಲವು ತುರ್ತು ಕ್ರಮಗಳನ್ನು ತೆಗೆದು ಕೊಳ್ಳುವ ನಿರ್ಧಾರ ಮಾಡಿದ್ದೇವೆ. ಸಂತೆಕಟ್ಟೆ ಕಾಮಗಾರಿಯನ್ನು ಸಮಯದೊಳಗೆ ಮುಗಿಸುವ ಕುರಿತೂ ನಾವು ಚರ್ಚಿಸಿದ್ದೇವೆ ಎಂದರು.
ಸಂತೆಕಟ್ಟೆಯಲ್ಲಿ ನೀರು ಒಸರುವ ಸಮಸ್ಯೆಯೊಂದಿಗೆ, ಬಂಡೆಕಲ್ಲನ್ನು ಸ್ಫೋಟಿಸುವ ಸಮಸ್ಯೆಯನ್ನೂ ಬಗೆಹರಿಸಬೇಕಿದೆ. ಹೆದ್ದಾರಿ ನಿರ್ಮಾಣ ಮಾರ್ಗದ ಬಳಿಯೇ ಗ್ರೌಂಡ್ ವಾಟರ್‌ನ ಸ್ಥಳವಿದ್ದು, ಅಲ್ಲಿ ನೀರು ಒಸರುತ್ತಿದೆ. ಇದಕ್ಕಾಗಿ ಐಐಟಿ ಮುಂಬೈನ ಭೂಗರ್ಭ ಶಾಸ್ತ್ರಜ್ಞರ ಸಲಹೆ ಪಡೆಯುತಿದ್ದೇವೆ. ಇದಕ್ಕಾಗಿ ಡ್ರೈನೇಜ್ ಹಾಗೂ ಪ್ರೆಝರ್ ವಾಲ್ ನಿರ್ಮಾಣ ಮಾಡುತಿದ್ದೇವೆ ಎಂದು ವಿಲಾಸ್ ನುಡಿದರು.
ಇಡೀ ಜಾಗವನ್ನು ಕಾಂಕ್ರಿಟೀಕರಣಗೊಳಿಸುತಿದ್ದೇವೆ. ಇದಕ್ಕಾಗಿ ಸಮಯ ತೆಗೆದುಕೊಳ್ಳಲಿದೆ. ಆದರೂ ಒಂದು ಬದಿಯ ಮಾರ್ಗದ ಕಾಂಕ್ರಿಟೀಕರಣ ವನ್ನು ಎಪ್ರಿಲ್ 15ರೊಳಗೆ ಮುಗಿಸುವ ಆಶಾವಾದದಲ್ಲಿದ್ದೇವೆ. ಮತ್ತೊಂದು ಬದಿಯ ಕಾಂಕ್ರಿಟೀಕರಣದೊಂದಿಗೆ ಇಡೀ ಕಾಮಗಾರಿಯನ್ನು ಜೂನ್- ಜುಲೈಯೊಳಗೆ ಮುಗಿಸುತ್ತೇವೆ. ಸ್ಥಳೀಯ ಪ್ರಯಾಣಿಕರಿಗೆ ಎಪ್ರಿಲ್ 15 ಅಥವಾ 30ರೊಳಗೆ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ವಿಲಾಸ್ ನುಡಿದರು.