×
Ad

ಉಡುಪಿ: ಸವಿತಾ ಮಹರ್ಷಿ ಜಯಂತಿ ಆಚರಣೆ

Update: 2025-02-04 22:05 IST

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸವಿತಾ ಸಮಾಜ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಇಂದು ಅಂಬಲಪಾಡಿಯಲ್ಲಿರುವ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು.

ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಪ್ರತಿಯೊಂದು ಸಮುದಾಯವನ್ನು ಗೌರವಿಸಿ, ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ ಸರಕಾರ ವಿವಿಧ ಜಯಂತಿ ಗಳನ್ನು ಆಚರಿಸುತ್ತಾ ಬಂದಿದೆ. ಇವರ ತತ್ವ, ಸಂದೇಶಗಳು ಸಾರ್ವಕಾಲಿಕ ವಾಗಿದ್ದು, ಅದರ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಸಮುದಾಯಗಳ ಬೆಳವಣಿಗೆಗೆ ಕಾರಣಕರ್ತರಾದ ದಾರ್ಶನಿಕರ ಜಯಂತಿ ಗಳನ್ನು ಜನಸಾಮಾನ್ಯರಿಗೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಆಚರಿಸುತ್ತಾ ಬರುವುದು ಸಂತಸದ ವಿಷಯ ಎಂದರು. ನವೀನ್‌ಚಂದ್ರ ಭಂಡಾರಿ ಅವರೂ ಮಾತನಾಡಿದರು.

ಜಿಲ್ಲಾ ಸವಿತಾ ಸಮಾಜದ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲ್ ಉಪನ್ಯಾಸ ನೀಡಿ ಮಾತನಾಡಿ, ಸವಿತಾ ಮಹರ್ಷಿಗಳು ಕ್ಷೌರಿಕ ಸಮಾಜದ ಮೂಲ ಪುರುಷ. ಅವರು ದೇವಾನುದೇವತೆಗಳಿಗೆ ಕ್ವೌರ ಮಾಡುತ್ತಿದ್ದರು ಎಂಬ ನಂಬಿಕೆ ಇದೆ. ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿದ ಮಹರ್ಷಿಗಳು ಬ್ರಹ್ಮಜ್ಞಾನ ಹೊಂದಿದ್ದ ಕಾರಣ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದಿದ್ದಾರೆ ಎಂಬ ಪ್ರತೀತಿ ಇದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ತಾಲೂಕು ತಹಶೀಲ್ದಾರ್ ಗುರುರಾಜ್, ಜಿಲ್ಲಾ ಸವಿತಾ ಸಮಾಜದ ಗೌರವ ಅಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ, ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ನಿಂಜೂರು ವಿಶ್ವನಾಥ ಭಂಡಾರಿ, ಸಮಾಜದ ವಿವಿಧ ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಮಂಜುನಾಥ ಪಡುಕೆರೆ ಕಾರ್ಯಕ್ರಮ ನಿರೂಪಿಸಿ, ಉಡುಪಿ ತಾಲೂಕು ಘಟಕದ ಅಧ್ಯಕ್ಷ ರಾಜು ಸಿ ಭಂಡಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News