×
Ad

ಶಿಕ್ಷಣ ತಜ್ಞ ಬಿ.ಸೀತಾರಾಮ ಶೆಟ್ಟಿ ನಿಧನ

Update: 2025-02-12 20:28 IST

ಉಡುಪಿ, ಫೆ.12: ಮೂರು ದಶಕಗಳ ಕಾಲ ಬಾರ್ಕೂರು ನೇಶನಲ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದ, ಶ್ರೇಷ್ಠ ಶಿಕ್ಷಣ ತಜ್ಞ, ಗ್ರಾಮಾಭಿವೃದ್ಧಿಯ ಚಿಂತಕ ಬಿ. ಸೀತಾರಾಮ ಶೆಟ್ಟಿ (85) ಅವರು ಇಂದು ಮುಂಜಾನೆ ಬಾರಕೂರಿನ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಅವರು ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಶಿಷ್ಯರು,ಅಭಿಮಾನಿಗಳನ್ನು ಅಗಲಿದ್ದಾರೆ. 1940ರ ಜ.14ರಂದು ಬ್ರಹ್ಮಾವರ ಸಮೀಪದ ಕುಮ್ರಗೋಡಿನಲ್ಲಿ ಜನಿಸಿದ ಸೀತಾರಾಮ ಶೆಟ್ಟಿ, ಪಾಂಡೇಶ್ವರ ಹಾಗೂ ಬಾರಕೂರು ಗಳಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನೂ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನೂ ಪಡೆದರು. ಧಾರವಾಡದ ಕರ್ನಾಟಕ ವಿವಿಯಿಂದ ಎಂಎ ಪದವಿ ಪಡೆದರು.

ವಂಡ್ಸೆ ಹೈಸ್ಕೂಲ್‌ನಲ್ಲಿ ಒಂದು ವರ್ಷ ಅಧ್ಯಾಪಕರಾಗಿ ಸೇವೆಸಲ್ಲಿಸಿದ್ದ ಸೀತಾರಾಮ ಶೆಟ್ಟಿ ಅವರು ಬಳಿಕ ಸುಮಾರು 35 ವರ್ಷಗಳ ಕಾಲ ಬಾರಕೂರಿನ ನೇಶನಲ್ ಹೈಸ್ಕೂಲ್ ಹಾಗೂ ಜೂನಿಯರ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ನೇಶನಲ್ ಜೂನಿಯರ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ 26 ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು.

ನಿವೃತ್ತಿಯ ಬಳಿಕ ಕೃಷಿ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲೂ ಅವರು ಸಲಹಾ ಸಮಿತಿಯ ಸದಸ್ಯರಾಗಿದ್ದರು. ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್, ಬಾರಕೂರಿನ ನೇತ್ರಾವತಿ ವಿಕಾಸ ವಾಹಿನಿ ಕ್ಲಬ್‌ಗಳ ಸದಸ್ಯರಾಗಿ ಅವರು ಸ್ಥಳೀಯ ಚಟುವಟಿಕೆಗಳಲ್ಲಿ ಮಾರ್ಗದರ್ಶಕರಾಗಿದ್ದರು.

ಕಲೆ-ಸಂಸ್ಕೃತಿ, ಯಕ್ಷಗಾನದ ಕುರಿತು ವಿಶೇಷ ಆಸಕ್ತ ಹೊಂದಿದ್ದ ಸೀತಾರಾಮ ಶೆಟ್ಟಿ ಅವರು ಯಕ್ಷಗಾನ ಕಲಾರಂಗದ ಆಜೀವ ಸದಸ್ಯರೂ ಆಗಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಅದ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News