×
Ad

ಮಕ್ಕಳಿಗೆ ಯಕ್ಷಗಾನ ಕಲಿಸಿ, ಸಂಸ್ಕಾರಯುತ ಸಮಾಜ ಬೆಳೆಸಿ: ತಲ್ಲೂರು

Update: 2025-02-12 20:41 IST

ಕಾಪು, ಫೆ.12: ಮಕ್ಕಳಿಗೆ ತಂದೆ ತಾಯಿ, ಹಿರಿಯರ ಪ್ರತೀತಿ, ವಾತ್ಸಲ್ಯ ಸಿಕ್ಕಿದರೆ ಸಾಲದು, ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಬಲ್ಲ ಸಂಸ್ಕಾರವೂ ಸಿಗಬೇಕು. ಈ ಸಂಸ್ಕಾರ ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ದೊರೆಯುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.

ಉಚ್ಚಿಲದ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾಸಂಘದ ವತಿಯಿಂದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಉಚ್ಚಿಲ ನಾರಾಯಣ ಗುರು ರಸ್ತೆಯ ವಠಾರದಲ್ಲಿ ರವಿವಾರ ನಡೆದ ‘ಪ್ರತಿಜ್ಞಾ ಭೀಷ್ಮ’ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಇಂದು ಮಕ್ಕಳಿಗೆ ಆಧುನಿಕ ಶಿಕ್ಷಣ ಸಿಗುತ್ತಿದೆ. ಆಧುನಿಕ ಸವಲತ್ತುಗಳ ಕೊರತೆಯೂ ಇಲ್ಲ. ಕೊರತೆ ಏನೆಂದರೆ ಮನೆಯ ಹಿರಿಯರಲ್ಲಿ ಮಾತನಾಡುವವರಿಲ್ಲ. ತಂದೆತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರಸಂಗಗಳು ಹೆಚ್ಚುತ್ತಿರುವುದು ಕಳವಳವನ್ನುಂಟು ಮಾಡುತ್ತಿದೆ. ಇದು ನಮ್ಮ ಸಂಸ್ಕೃತಿಗೆ ಶೋಭೆ ತರುವ ವಿಚಾರವಲ್ಲ. ಹೀಗಾಗಿ ಭವಿಷ್ಯದಲ್ಲಿ ಮಕ್ಕಳು ಸುಸಂಸ್ಕೃತರಾಗಿ ಬಾಳಬೇಕೇ ಅವರಿಗೆ ಯಕ್ಷಗಾನ ಕಲಿಸಿ. ಯಕ್ಷಗಾನದ ಪುರಾಣ ಪ್ರಸಂಗಗಳು ನೈತಿಕತೆಯ ಪಾಠ ಕಲಿಸುವುದಲ್ಲದೆ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ದಾರಿ ದೀಪವಾಗಿದೆ ಎಂದರು.

ಈ ಸಂದರ್ಭದಲ್ಲಿ ಯಕ್ಷಗಾನ ರಂಗದಲ್ಲಿ ಮರೆಯಾಗುತ್ತಿರುವ ಯಕ್ಷಗಾನ ಪೂರ್ವರಂಗದ ಸೂತ್ರಧಾರ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಪಾಂಡವರ ಒಡ್ಡೋಲಗವನ್ನು ಪ್ರದರ್ಶಿಸಲಾಯಿತು. ಅಧ್ಯಕ್ಷತೆಯನ್ನು ಕಲಾಸಂಘದ ಅಧ್ಯಕ್ಷ ಸತೀಶ್ ಭಟ್ ಉಚ್ಚಿಲ ವಹಿಸಿದ್ದರು. ಡಾ.ಗುರುಪ್ರಸಾದ್ ನಾವಡ ಯು.ಕೆ., ಗಣೇಶ್ ಡಿ.ಪೂಜಾರಿ ಉಚ್ಚಿಲ, ಬಸವರಾಜ್ ಎ.ರಾವ್ ಉಚ್ಚಿಲ ಮೊದಲಾದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News