ಜನ ಸಾಮಾನ್ಯರಿಗೆ ಸುಳ್ಳು, ಸತ್ಯದ ಮನವರಿಕೆ ಅಗತ್ಯ: ಸಂಸದ ಕೋಟ
ಉಡುಪಿ, ಫೆ.15: ಬಜೆಟ್ ಬಗ್ಗೆ ಅಪಪ್ರಚಾರಕ್ಕೆ ಅವಕಾಶ ಕಲ್ಪಿಸದೆ, ಜನ ಸಾಮಾನ್ಯರಿಗೆ ಸುಳ್ಳು ಹಾಗೂ ಸತ್ಯವನ್ನು ಮನವರಿಕೆ ಮಾಡಿಕೊಡಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಆರ್ಥಿಕ ಕೋಶ ವತಿಯಿಂದ ಉಡುಪಿ ಹೋಟೆಲ್ ಕಿದಿಯೂರಿನ ಮಾಧವ ಕೃಷ್ಣ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಕೇಂದ್ರ ಬಜೆಟ್, ಭಾರತೀಯ ಆರ್ಥಿಕತೆ ಮತ್ತು ಆದಾಯ ತೆರಿಗೆಯಲ್ಲಿ ಇತ್ತೀಚಿನ ಸುಧಾರಣೆಗಳು ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರಜಾಪ್ರಭುತ್ವದಲ್ಲಿ ಚರ್ಚೆ, ವಾದ, ಟೀಕೆ, ಟಿಪ್ಪಣಿ, ವಿಮರ್ಶೆ ಸಹಜ. ಆದರೆ ಸತ್ಯಕ್ಕೆ ಅಪಚಾರವಾಗದಂತೆ ನ್ಯಾಯ ಒಪ್ಪಿಕೊಳ್ಳಬೇಕು. ಮುಖಕ್ಕಿಂತ ಹೆಚ್ಚು ಮುಖವಾಡಕ್ಕೆ ಬೆಲೆ ಬರುತ್ತಿದೆ. ಮಧ್ಯಮ ವರ್ಗಕ್ಕೆ ವಾರ್ಷಿಕ12.5ಲಕ್ಷ ರೂ. ತನಕ ಆದಾಯ ತೆರಿಗೆ ವಿನಾಯಿತಿಯಿಂದ ಉಳಿತಾಯವಾಗಲಿದೆ ಎಂದರು.
ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಆರ್ಥಿಕ ಕೋಶ ಸಹ ಸಂಚಾಲಕ ಸುಧೀರ್ ಆರ್.ಭಟ್ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ -2025 ಮತ್ತು ಭಾರತೀಯ ಆರ್ಥಿಕತೆ ಕುರಿತು ಬೆಂಗಳೂರಿನ ಹಿರಿಯ ಆರ್ಥಿಕ ತಜ್ಞ ವಿಶ್ವನಾಥ್ ಭಟ್ ಹಾಗೂ ಆದಾಯ ತೆರಿಗೆ ಕಾಯಿದೆಯಲ್ಲಿ ಇತ್ತೀಚಿನ ಸುಧಾರಣೆಗಳು ವಿಷಯವಾಗಿ ಉಡುಪಿಯ ಹಿರಿಯ ಲೆಕ್ಕ ಪರಿಶೋಧಕ ಸಿಎ ಶ್ರೀಧರ ಕಾಮತ್ ಮಾತನಾಡಿದರು.
ಬಿಜೆಪಿ ಆರ್ಥಿಕ ಕೋಶದ ಸಂಚಾಲಕ ದಿವಾಕರ್ ಶೆಟ್ಟಿ ಸ್ವಾಗತಿಸಿದರು. ದಿಲೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.