×
Ad

ನಿಷ್ಠಾವಂತ ಶಿಕ್ಷಕರಿಂದ ಸಾಮರಸ್ಯದ ಸಮಾಜದ ನಿರ್ಮಾಣ ಸಾಧ್ಯ: ಭೋಜೇಗೌಡ

Update: 2025-02-16 20:13 IST

ಉಡುಪಿ, ಫೆ.16: ಸ್ವಾಭಿಮಾನ, ಗೌರವ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ಹೃದಯವಂತ ಶಿಕ್ಷಕರಿಂದ ಮಾತ್ರ ಸಾಮರಸ್ಯದ ಸಮಾಜದ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದ್ದಾರೆ.

ಉಡುಪಿ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಶನಿವಾರ ಜರಗಿದ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕ ಮತ್ತು ತಾಲೂಕು ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಮಾಜದ ಪ್ರಗತಿ ಹಾಗೂ ಸ್ವಾಥ್ಯವನ್ನು ಕಾಪಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು. ಶಿಕ್ಷಕರು ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ಸಂತೋಷದಿಂದ ಕರ್ತವ್ಯ ನಿರ್ವಹಿಸುವಲ್ಲಿ ಸಂಘಟಿತರಾಗುವುದು ಬಹಳ ಮುಖ್ಯ. ಶಿಕ್ಷಕರ ಬಗೆಗಿನ ಗೌರವ ಕಡಿಮೆಯಾದರೆ ಅದು ನೇರವಾಗಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಶೈಕ್ಷಣಿಕ ಸಾಧನೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಎಚ್‌ಪಿಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರಿಪ್ರಸಾದ್ ರೈ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಗಣಪತಿ ಕೆ., ಉಡುಪಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಆನಂದ ಶೆಟ್ಟಿ ಬ್ರಹ್ಮಾವರ, ಕಾರ್ಯದರ್ಶಿ ನಾಗರಾಜ ತೆಕ್ಕಟ್ಟೆ, ಕೋಶಾಧಿಕಾರಿ ಸಂಪತ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರೇಮಾನಂದ ಬಾರ್ಕೂರು, ಜೊತೆಕಾರ್ಯದರ್ಶಿ ರಾಜೀವ್ ಶೇಡಿಮನೆ, ಕಾರ್ಕಳ ತಾಲೂಕು ಅಧ್ಯಕ್ಷ ಆನಂದ ಶೆಟ್ಟಿ, ಉಡುಪಿ ತಾಲೂಕು ಅಧ್ಯಕ್ಷ ಸಂಜೀವ ನಾಯಕ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಮನೋಹರ ಹೆಗ್ಡೆ, ಕುಂದಾಪುರ ತಾಲೂಕು ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಬೈಂದೂರು ತಾಲೂಕು ಅಧ್ಯಕ್ಷ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಜಿಲ್ಲಾ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಾಗರಾಜ ತೆಕ್ಕಟ್ಟೆ ವರದಿ ವಾಚಿಸಿದರು. ಗಣೇಶ್ ಜಾಲ್ಸೂರು ಹಾಗೂ ಶಿವಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ರಾಜೀವ ಪೂಜಾರಿ ಶೇಡಿಮನೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News