×
Ad

ಉಡುಪಿ ನಗರಸಭೆ ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪ: ಕೆಮ್ಮಣ್ಣು ಗ್ರಾಮಸ್ಥರ ವಿರೋಧ

Update: 2025-02-16 20:23 IST

ಉಡುಪಿ, ಫೆ.16: ಉಡುಪಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ಕೆಮ್ಮಣ್ಣು ಗ್ರಾಪಂ ಕಚೇರಿಯಲ್ಲಿ ಇತ್ತೀಚೆಗೆ ಕರೆಯಲಾದ ವಿಶೇಷ ಗ್ರಾಮ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಸಭೆಯಲ್ಲಿ ಉಡುಪಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ರಾಜ್ ಮೇಲ್ದರ್ಜೇಗೇರಿಸುವ ಪ್ರಸ್ತಾಪದ ಕುರಿತು ಮಾಹಿತಿ ನೀಡಿದರು. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ಹಲವು ಅನಾನುಕೂಲ ಆಗುವುದರಿಂದ ಈ ಪ್ರಸ್ತಾಪವನ್ನು ಕೈಬಿಡುವಂತೆ ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದರು.

ನಗರಸಭೆಯನ್ನು ನಮ್ಮ ಗ್ರಾಪಂ ಸೇರಿದಂತೆ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವುದರಿಂದ ನಷ್ಟವೇ ಹೊರತು ಪ್ರಯೋಜನವಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯ ಇದ್ರಿಸ್ ಹೂಡೆ ತಿಳಿಸಿದರು. ಮಹಾ ನಗರಪಾಲಿಕೆಗೆ ಗ್ರಾಪಂನ್ನು ಸೇರಿಸುವ ಮೊದಲು ಈ ಗ್ರಾಮದ ಜನರ ಆದಾಯದ ಸ್ತರದ ಬಗ್ಗೆ ಯೋಚಿಸುವುದು ಉತ್ತಮ. ಆದುದರಿಂದ ಗ್ರಾಮಸ್ಥರಿಗೆ ಈ ಬೆಳವಣಿಗೆಯಿಂದ ತೆರಿಗೆ ಹೊರೆ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಟೀಕಿಸಿದರು.

1994 -95ರಲ್ಲಿ ಕೊಡವೂರು, ಪುತ್ತೂರು, 76 ಬಡಗುಬೆಟ್ಟು, ಶಿವಳ್ಳಿ ಮತ್ತು ಹೆರ್ಗ ಗ್ರಾಮಗಳನ್ನು ಉಡುಪಿ ನಗರಸಭೆಗೆ ಸೇರ್ಪಡೆ ಮಾಡಲಾಯಿತು. ಸೇರ್ಪಡೆಯಾದ ನಂತರ ಈ ಗ್ರಾಮಗಳ ಜನರು ತೆರಿಗೆ ಪಾವತಿಸುತ್ತಿದ್ದಾರೆಯೇ ಹೊರತು ಈ ವಾರ್ಡ್‌ಗಳ ಯಾವುದೇ ಅಭಿವೃದ್ಧಿ ಆಗಿಲ್ಲ. ನಗರಕ್ಕೆ ಸೇರಿಸಲ್ಪಟ್ಟ ಈ ಹಳೆ ಗ್ರಾಪಂ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕೂಡ ಇಲ್ಲ ಮತ್ತು ರಸ್ತೆಗಳೂ ನಿರ್ಮಾಣಗೊಂಡಿಲ್ಲ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News