×
Ad

ಯಕ್ಷಗಾನದಿಂದ ವಿದ್ಯಾರ್ಥಿಗಳಲ್ಲಿ ತಾಳ್ಮೆ ಏಕಾಗ್ರತೆ ಮೂಡಲು ಸಾಧ್ಯ: ಸ್ಪೀಕರ್ ಯು.ಟಿ.ಖಾದರ್

Update: 2025-02-16 21:10 IST

ಉಡುಪಿ, ಫೆ.16: ಇಂದಿನ ಆಧುನಿಕ, ತಂತ್ರಜ್ಞಾನದ ವೇಗದ ಯುಗದಲ್ಲಿ ಯುವಜನತೆಗೆ ತಾಳ್ಮೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳಲ್ಲಿ ತಾಳ್ಮೆ, ನೆಮ್ಮದಿ, ಏಕಾಗ್ರತೆ ಮೂಡಲು ಯಕ್ಷಗಾನ, ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ತರಬೇತಿ ಅಗತ್ಯವಾಗಿದೆಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.

ಉಡುಪಿಯ ಯಕ್ಷಗಾನ ಕಲಾ ರಂಗದ ಐವೈಸಿ ಸಭಾಂಗಣದಲ್ಲಿ ರವಿವಾರ ನಡೆದ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿಗಳೂ ಸೇರಿದಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಿರು ಪರಿಚಯ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಯಕ್ಷಗಾನ ಮ‌ತ್ತು ಕಂಬಳ ನಮ್ಮ ಕರಾವಳಿಯ ಜಿಲ್ಲೆಗಳ ಎರಡು ಕಣ್ಣುಗಳು. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯಕ್ಷಗಾನ ಕಲೆಯನ್ನು ಯುವಜನತೆಗೆ ಕಲಿಸುವುದರ ಜೊತೆಗೆ ಅದರ ಮಹತ್ವವನ್ನು ಜನಸಾಮಾನ್ಯ ತಿಳಿಸಿ ಜಾಗೃತಿ ಮೂಡಿಸುವ ಕಾರ್ಯ ಅಕಾಡೆಮಿ ಮೂಲಕ ಆಗಬೇಕು ಎಂದು ಅವರು ತಿಳಿಸಿದರು.

ಮಕ್ಕಳಿಗಿಂತ ಮುಖ್ಯ ಪೋಷಕರಿಗೆ ಯಕ್ಷಗಾನದ ಮಹತ್ವವನ್ನು ತಿಳಿಸಿ ಕೊಡಬೇಕು. ಆಗ ಮಕ್ಕಳಿಗೂ ಯಕ್ಷಗಾನ ಕಲಿ ಸುವ ಆಸಕ್ತಿಯನ್ನು ಅವರು ತೋರಿಸುತ್ತಾರೆ. ಈಗ ಯಕ್ಷಗಾನ ಮಕ್ಕಳಿಗೆ ಕಲಿಸಿದರೆ, ಮುಂದೆ ಅರದ ಪ್ರಯೋಜನ ಪೋಷಕರಿಗೆ ಸಿಗುತ್ತದೆ. ಕಲೆಗಳಿಂದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬಹುದಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ನಮ್ಮ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯವನ್ನು ಯಕ್ಷಗಾನ ಕಲೆ ಮಾಡು ತ್ತಿದೆ. ಆದುದರಿಂದ ಇಂತಹ ಕಲೆ, ಸಂಗೀತ, ನೃತ್ಯ ಪ್ರಕಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರತಿಷ್ಠಿತ ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿಯನ್ನು ಯಕ್ಷಗಾನ ಗುರು ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರದಾನ ಮಾಡ ಲಾಯಿತು. ಅದೇ ರೀತಿ ಐವರು ಹಿರಿಯ ಯಕ್ಷಗಾನ ಕಲಾವಿದರಿಗೆ 2024ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 10 ಮಂದಿ ಕಲಾವಿದರಿಗೆ 2024ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಸಲಾಯಿತು. ಬಂಟ್ವಾಳದ ಕರ್ಗಲ್ಲು ವಿಶ್ವೇಶ್ವರ ಭಟ್ಟ ಅವರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ ವಹಿಸಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಗರ ಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಾಹೆಯ ಸಹ ಕುಲಪತಿ ಡಾ.ನಾರಾಯಣ ಸಭಾಹಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಉಪಸ್ಥಿತರಿದ್ದರು.

ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಎನ್. ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಮುನ್ನಾ ಮಾಗಧ ವಧೆ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ಹಾಗೂ ಸಮಾರಂಭದ ಬಳಿಕ ಮಹಿಷ ಮರ್ದಿನಿ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News