×
Ad

ದೇವರು ತೋರಿದ ಮಾರ್ಗದಲ್ಲಿ ನಡೆದರೆ ಬದುಕಲ್ಲಿ ಶ್ರೇಯಸ್ಸು: ಕೃಷ್ಣಾಪುರ ಸ್ವಾಮೀಜಿ

Update: 2025-03-06 20:01 IST

ಉಡುಪಿ, ಮಾ.6: ದೇವರು ತೋರಿದ ಮಾರ್ಗದಲ್ಲಿ ಮುನ್ನಡೆದರೆ ಮಾತ್ರ ಬದುಕಿನಲ್ಲಿ ಶ್ರೇಯಸ್ಸು ಹಾಗೂ ಸಾರ್ಥಕ್ಯ ಗಳಿಸಲು ಸಾಧ್ಯ ಎಂದು ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು ಹೇಳಿದ್ದಾರೆ.

ಶೀರೂರು ಮಠದಲ್ಲಿ ಗುರುವಾರ ನಡೆದ ಪರ್ಯಾಯ ಪೂರ್ವಭಾವಿ ಅಕ್ಕಿ ಮುಹೂರ್ತದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತಿದ್ದರು. ಶ್ರೀವಾದಿರಾಜರು ಹಾಕಿಕೊಟ್ಟ ಪರ್ಯಾಯ ಪೂರ್ವಭಾವಿ ಮುಹೂರ್ತ ಪರಂಪರೆಯಲ್ಲಿ ದೇವರ ಆರಾಧನೆ ಮತ್ತು ಅನ್ನ ದಾಸೋಹಕ್ಕೆ ಪ್ರಾಧಾನ್ಯ ನೀಡಲಾಗಿದೆ ಎಂದರು.

ಭಾವಿ ಪರ್ಯಾಯ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಅನ್ನ ಎಂದರೆ ಪರಮಾತ್ಮ. ಪರಮಾತ್ಮನ ಪರ್ಯಾಯಕ್ಕೆ ಎಲ್ಲರೂ ಬರಬೇಕು. ಗುರು ಹಿರಿಯರ ನೆಲೆಯಲ್ಲಿ ಸಪ್ತ ಯತಿಗಳು ಅಕ್ಕಿ ಮುಹೂರ್ತಕ್ಕೆ ಬಂದಿದ್ದು ಎಲ್ಲರ ಅನುಗ್ರಹ ದೊರೆತಂತಾ ಗಿದೆ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉಪಸ್ಥಿತರಿದ್ದರು. ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥರು, ಶ್ರೀಕ್ಷೇತ್ರ ಧರ್ಮಸ್ಥಳ ಸಹಿತ ನಾನಾ ಕ್ಷೇತ್ರಗಳಿಂದ ಮುಷ್ಠಿ ಅಕ್ಕಿ ಸಮರ್ಪಿಸಲಾಯಿತು. ಅಷ್ಟಮಠಗಳ ಸಹಿತ ಭೀಮನಕಟ್ಟೆಘಿ, ನಾಗಬನ ಗೋಪಾಲಪುರ ಮಠ, ಅಣ್ಣಯ್ಯಾಚಾರ್ಯ ಮಠ, ಭಂಡಾರಕೇರಿ ಮಠ, ಉತ್ತರಾದಿಮಠ, ವ್ಯಾಸರಾಜ ಮಠದಿಂದ ಸಮರ್ಪಿಸಿದ ಅಕ್ಕಿ ಮುಡಿಗಳನ್ನು ಶೀರೂರು ಮಠದ ಪ್ರಾಂಗಣದಲ್ಲಿ ಅಲಂಕಾರಿಕವಾಗಿ ಜೋಡಿಸಿಡಲಾಯಿತು.

ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥರು, ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥರು, ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರು ಆಶೀರ್ವಚನ ನೀಡಿದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News