×
Ad

ಮಲ್ಪೆ: ಮೀನುಗಾರಿಕಾ ಬಂದರು ಅಭಿವೃದ್ಧಿ ಬಗ್ಗೆ ಚರ್ಚೆ

Update: 2025-03-15 22:16 IST

ಮಲ್ಪೆ, ಮಾ.15: ಮಲ್ಪೆ ಮೀನುಗಾರಿಕಾ ಬಂದರಿನೊಳಗೆ ಇರುವ ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕುರಿತಂತೆ ಮೀನುಗಾರಿಕೆ ಮತ್ತು ಬಂದರು ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು.

ಮೀನುಗಾರಿಕಾ ಬಂದರಿನ ಸಮರ್ಪಕ ನಿರ್ವಹಣೆ ಹಾಗೂ ಪ್ರಸ್ತಾವಿತ ಅಭಿವೃದ್ದಿ ಕಾಮಗಾರಿಗಳ ಕುರಿತು ಶಾಸಕರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಮೀನುಗಾರಿಕಾ ಬಂದರಿನಲ್ಲಿ ಸ್ವಚ್ಚತೆ, ಭದ್ರತೆಯ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸುವಂತೆ ನಿರ್ವಹಣೆ ಗುತ್ತಿಗೆ ಪಡೆದ ಸಂಸ್ಥೆಗೆ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಬೇಕು ಎಂದರು.

ಮಲ್ಪೆ ಬಂದರಿನಲ್ಲಿ ಈಗಾಗಲೇ ಮಂಜೂರುಗೊಂಡಿರುವ ನಮ್ಮ ಕ್ಲಿನಿಕ್ ಕೇಂದ್ರ ತಕ್ಷಣ ಆರಂಭಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಭವಿಷ್ಯದ ಮೀನುಗಾರಿಕೆಯ ನಿಟ್ಟಿನಲ್ಲಿ ಬಂದರು ಇಲಾಖೆಯ ಅಧೀನದಲ್ಲಿರುವ ಜಾಗಗಳನ್ನು ಮೀನುಗಾರಿಕಾ ಉದ್ದೇಶಗಳಿಗೆ ಮೀಸಲು ಇಡುವಂತೆ ತಿಳಿಸಿದರು.

ಉದ್ದೇಶಿತ ಔಟರ್ ಹಾರ್ಬರ್ ಯೋಜನೆ, ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಮಗಾರಿ ಶೀಘ್ರ ಆರಂಭ, ಬೋಟ್ ಮರು ನಿರ್ಮಾಣ ಹಾಗೂ ಹೊಸ ಇಂಜಿನ್ ಅಳವಡಿಕೆಗೆ ಅನುಮತಿ, ಡ್ರೆಜ್ಜಿಂಗ್ ಕಾಮಗಾರಿ, ಟೆಂಡರ್ ಹಂತ ದಲ್ಲಿರುವ ವಾಟರ್ ಟ್ಯಾಂಕ್, ಬಂದರಿನೊಳಗೆ ಸಿಸಿಟಿವಿ ಅಳವಡಿಕೆ, ತ್ಯಾಜ್ಯ ನೀರು ಸಂಸ್ಕರಣ ಘಟಕ ಕಾಮಗಾರಿ ಸಹಿತ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ವಿವೇಕ್, ಇಲಾಖೆಯ ಅಧಿಕಾರಿಗಳಾದ ಸವಿತಾ ಖಾದ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ, ಮೀನುಗಾರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News