ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರ ಅನಾವರಣ
ಕುಂದಾಪುರ, ಜೂ.4: ಈವರೆಗಿನ ಶಾಲಾ ಪಠ್ಯಪುಸ್ತಕಗಳಲ್ಲಿ ಸತ್ಯಕ್ಕಿಂತ ಹೆಚ್ಚು ಸುಳ್ಳುಗಳನ್ನು ಮಕ್ಕಳಿಗೆ ಪಾಠದ ಮೂಲಕ ಹೇಳಿಸಲಾಗಿದೆ. ಇದರ ಸತ್ಯಗಳು ಕೆಲವರಿಗೆ ಗೊತ್ತಿದ್ದರೂ ಮೌನವಾಗಿದ್ದಾರೆ. ಸುಳ್ಳುಗಳನ್ನಷ್ಟೇ ಪ್ರಚಾರ ಮಾಡುವ ವರ್ಗಗಳಿವೆ. ಈಗ ಪಠ್ಯ ಪುಸ್ತಕದ ಬದಲಾವಣೆ ಪರ್ವ ದೇಶದಲ್ಲಿ ಆರಂಭವಾಗಿದೆ ಎಂದು ಸಾಹಿತಿ, ನಿವೃತ್ತ ಉಪನ್ಯಾಸಕಿ ಡಾ.ಪಾರ್ವತಿ ಜಿ. ಐತಾಳ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕದಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೆಯ ಜನ್ಮ ದಿನಾಚರಣೆ ಪ್ರಯುಕ್ತ ಕುಂದಾಪುರದ ಪದವಿ ಪೂರ್ವ ಕಾಲೇಜಿನ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಲಾದ ಸಂಸ್ಥಾಪನ ದಿನಾಚರಣೆಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.
ಕನ್ನಡ ನಾಡು ನುಡಿ ಮತ್ತು ಸಾಹಿತ್ಯ ಪರಿಷತ್ತಿನ ಬಗ್ಗೆ ತಾಲೂಕು ಘಟಕದ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಮಾತನಾಡಿ, ನಾಲ್ವಡಿ ಒಡೆಯರ್ ಸ್ಥಾಪಿಸಿದ 30ಕ್ಕಿಂತ ಹೆಚ್ಚು ಸಂಸ್ಥೆಗಳು ಇಂದಿಗೂ ಜನ ನೆನಪಿಸಿಕೊಳ್ಳುತ್ತಾ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಾಗಿವೆ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ಭಾಷಣ ಮಾಡಿ, ಕಸಾಪಕ್ಕೆ ಈಗ ರಾಜ್ಯ ಸರಕಾರದಿಂದ ಅನುದಾನ ಬರುತ್ತಿಲ್ಲ. ಸ್ಥಾಪಕರ ದಿನಕ್ಕೆ 4 ಸಾವಿರ ರೂ. ಬರುತ್ತಿದ್ದ ಅನುದಾನ, ತಾಲೂಕು ಸಮ್ಮೇಳನಕ್ಕೆ ನೀಡುತ್ತಿದ್ದ ಅನುದಾನ ಸ್ಥಗಿತವಾಗಿದೆ. ಬಹುತೇಕ ಜಿಲ್ಲೆಗಳಿಗೆ ಜಿಲ್ಲಾ ಸಮ್ಮೇಳನಕ್ಕೇ ಅನುದಾನ ಬಂದಿಲ್ಲ ಎಂದರು.
ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಜಿಲ್ಲಾ ಕಸಾಪ ಕೋಶಾಧಿಕಾರಿ ಮನೋಹರ ಪಿ., ತಾಲೂಕು ಕಾರ್ಯದರ್ಶಿ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು. ಉಪನ್ಯಾಸಕ ಕಾಳಾವರ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.