ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ; ಅನೇಕ ಮನೆಗಳಿಗೆ ಹಾನಿ
ಉಡುಪಿ, ಜೂ.12: ಬುಧವಾರ ಸಂಜೆ ಬಿರುಸುಗೊಂಡ ಮಳೆ, ಇಂದು ದಿನವಿಡೀ ನಿರಂತರವಾಗಿ ಮುಂದುವರಿಯಿತು. ಜಿಲ್ಲೆಯಾದ್ಯಂತ ಅನೇಕ ಮನೆಗಳಿಗೆ ಮಳೆ-ಗಾಳಿಯಿಂದ ಹಾನಿಯಾದ ವರದಿಗಳೂ ಬಂದಿದ್ದು, ಕಾಪು ತಾಲೂಕಿನ ಇನ್ನಂಜೆಯಲ್ಲಿ ಹೆಂಚೊಂದು ಬಿದ್ದು ಮಹಿಳೆಯೊಬ್ಬರು ಗಾಯ ಗೊಂಡಿದ್ದಾರೆ.
ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆ 8:30ರ ನಡುವಿನ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 96.5ಮಿ.ಮೀ.ಮಳೆ ಬಿದ್ದಿದೆ. ಬೈಂದೂರಿನಲ್ಲಿ ಅತ್ಯಧಿಕ 11.5 ಸೆ.ಮಿ., ಬ್ರಹ್ಮಾವರದಲ್ಲಿ 11.1ಸೆ.ಮೀ. ಹಾಗೂ ಉಡುಪಿಯಲ್ಲಿ 10ಸೆ.ಮೀ. ಮಳೆಯಾದ ವರದಿ ಬಂದಿದೆ.
ದಿನದಲ್ಲಿ ಐದಕ್ಕೂ ಅಧಿಕ ವಾಸದ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿಗಳು ಬಂದಿವೆ. ಕಾಪು ತಾಲೂಕಿನ ಇನ್ನಂಜೆಯಲ್ಲಿ ಉದಯ ಜೋಗಿ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದು, ಮನೆಗೆ ಭಾಗಶ: ಹಾನಿಯಾಗಿದೆ. ಇದರಿಂದ ಒಂದು ಲಕ್ಷ ರೂ.ಗಳಿಗೂ ಅಧಿಕ ಹಾನಿಯ ಅಂದಾಜು ಮಾಡಲಾ ಗಿದೆ. ಇದೇ ವೇಳೆ ಉದಯ ಅವರ ಪತ್ನಿ ನಾಗರತ್ನ ಜೋಗಿ ಅವರ ತಲೆಯ ಮೇಲೆ ಹೆಂಚು ಬಿದ್ದು ಗಾಯಗೊಂಡಿರುವುದಾಗಿ ಕಾಪು ತಹಶೀಲ್ದಾರರು ತಿಳಿಸಿದ್ದಾರೆ.
ಇನ್ನುಳಿದಂತೆ ಕಾಪು ತಾಲೂಕು ಮೂಳೂರು ಗ್ರಾಮದ ಶೇಖರ ಮುಖಾರಿ ಎಂಬವರ ಮನೆಯ ಗೋಡೆ ಗಾಳಿ-ಮಳೆಗೆ ಭಾಗಶ: ಕುಸಿದು ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಅಶೋಕ್ ರಾವ್ ಎಂಬವರ ಮನೆಯೂ ಇಂದು ಮಳೆಗೆ ಭಾಗಶ: ಕುಸಿದಿದೆ.
ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಹೊಸವಕ್ಲು ಮನೆ ಎಂಬಲ್ಲಿಯ ನಿವಾಸಿ ಪದ್ದು ಪೂಜಾರಿ ಅವರ ವಾಸ್ತವ್ಯದ ಪಕ್ಕಾ ಮನೆಯ ಮಣ್ಣಿನ ಗೋಡೆ ಸುರಿದ ಸತತ ಮಳೆಗೆ ಇಂದು ಬೆಳಗ್ಗೆ ಕುಸಿದು ಬಿದ್ದಿದೆ. 25 ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಕೋಟೇಶ್ವರದ ಗೋಪಾಡಿ ರಸ್ತೆಯಲ್ಲಿ ಸುಶೀಲ ಎಂಬವರ ಮನೆ ಮೇಲೆ ಅಡಿಕೆ ಮರ ಬಿದ್ದು ಮನೆಗೆ ಭಾಗಶ: ಹಾನಿಯಾಗಿರುವುದಾಗಿ ತಿಳಿದುಬಂದಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಇನ್ನೂ ನಾಲ್ಕು ದಿನ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ದಿನಗಳಲ್ಲಿ ರೆಡ್ ಅಲರ್ಟ್‌ನ್ನು ನೀಡಿದೆ. ಉಳಿದಂತೆ ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ರೆಡ್ ಅಲರ್ಟ್ ಮುಂದುವರಿಯಲಿದೆ. ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಇನ್ನೂ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಿಸಲಾಗಿತ್ತು.