ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಂದ ಸಮುದ್ರಪೂಜೆ
ಮಲ್ಪೆ, ಜೂ.13: ಮಲ್ಪೆ ವಲಯ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಮಲ್ಪೆ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಶುಕ್ರವಾರ ಸಂಪ್ರದಾಯದಂತೆ ಸಮುದ್ರ ಪೂಜೆ ನಡೆಯಿತು.
ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರಿಗೆ ಗಣಹೋಮ, ವಿಶೇಷ ಪೂಜೆ ನೆರವೇರಿಸಿ, ಬಳಿಕ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಲಾಯಿತು. ತದನಂತರ ಸಮೀಪದ ಬೊಬ್ಬರ್ಯ ದೈವಸ್ಥಾನದಲ್ಲಿ ಪಂಜುರ್ಲಿ ದೈವಕ್ಕೆ ಹಣ್ಣು ಕಾಯಿ ಪೂಜೆ ನಡೆದು ಶೋಭಾಯಾತ್ರೆ ಯಲ್ಲಿ ತೆರಳಿ ಸಮುದ್ರದಲ್ಲಿ ಸಮುದ್ರರಾಜನಿಗೆ ಶಾಸ್ತ್ರೋಕ್ತ ವಿಧಿವಿಧಾನದೊಂದಿಗೆ ಪೂಜೆ ಸಲ್ಲಿಸಲಾಯಿತು.
‘ಮತ್ಸ್ಯಸಂಪತ್ತು ವೃದ್ಧಿ, ಮೀನುಗಾರರ ಕ್ಷೇಮ ಹಾಗೂ ಲೋಕ ಸುಭೀಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದೇವೆ. ಇಂದಿನಿಂದ ಸಾಂಪ್ರದಾಯಿಕ ನಾಡದೋಣಿಗಳನ್ನು ಸಮುದ್ರಕ್ಕೆ ಇಳಿಸಬಹುದು. ಆದರೆ ರೆಡ್ ಆಲರ್ಟ್ ಇರುವುದರಿಂದ ಜೂ.16 ಅಥವಾ 17ಕ್ಕೆ ಮೀನುಗಾರರು ಕಡಲಿಗಿಳಿಯಲು ನಿರ್ಧರಿಸಿ ದ್ದಾರೆ ಎಂದು ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ ಪಿ. ಸಾಲ್ಯಾನ್ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಪ್ರಸಾದ್‌ರಾಜ್ ಕಾಂಚನ್, ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಉಪಾಧ್ಯಕ್ಷ ದೇಜಪ್ಪ ಕೋಟ್ಯಾನ್, ಕಾರ್ಯದರ್ಶಿ ಯುವರಾಜ್ ಸಾಲ್ಯಾನ್, ಕಂತು ಬಲೆ ಮೀನುಗಾರರ ಸಂಘದ ಅಧ್ಯಕ್ಷ ಯಾಧವ ಅಮೀನ್, ಟ್ರಾಲ್ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಕಾಂಚನ್, ಮಲ್ಪೆ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಸುವರ್ಣ, ಪ್ರಮುಖರಾದ ವಾಸು, ವಿಜಯ, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.