ಉಡುಪಿ ಶ್ರೀಕೃಷ್ಣ ಮಠದಲ್ಲಿ ಹಲಸು -ಮಾವು ಮೇಳಕ್ಕೆ ಚಾಲನೆ
ಉಡುಪಿ, ಜೂ.13: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಗೀತಾ ಮಂದಿರ ದಲ್ಲಿ ಹಮ್ಮಿಕೊಳ್ಳಲಾದ ಹಲಸು ಹಾಗೂ ಮಾವು ಮೇಳಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಇಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ಕರಾವಳಿಯ ಭಾಗದಲ್ಲಿ ಹೇರಳವಾಗಿ ದೊರೆಯುವ ಹಲಸು ಮಾವು ಗಳ ವೈವಿಧ್ಯ ಖಾದ್ಯಗಳನ್ನು ಈ ಮೇಳದಲ್ಲಿ ಪ್ರದರ್ಶಿಸುತ್ತಿದ್ದಾರೆ. ಜನರು ಶ್ರೀಕೃಷ್ಣನ್ನು ಸ್ಮರಿಸಿ ಈ ಮೇಳದ ಪ್ರಯೋಜನವನ್ನು ಗೀತಾ ಮಂದಿರದಲ್ಲಿ ಪಡೆದು ಕೊಳ್ಳಬಹುದು. ತನ್ಮೂಲಕ ಕರ್ಮ ಫಲದ ಸಮರ್ಪಣೆಯಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭವಾನಿ ಗ್ರೂಪ್ಸ್‌ನ ಮಾಲಕ ಕುಸುಮೋದರ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಠದಿವಾನ ನಾಗರಾಜ್ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ರತೀಶ್ ತಂತ್ರಿ, ಅನಂತ ಕೃಷ್ಣ, ರಮೇಶ್ ಭಟ್, ಅನಂತಕೃಷ್ಣ, ಪ್ರಮೋದ್ ಸಾಗರ್ ಮುಂತಾದವರು ಉಪಸ್ಥಿತರಿದ್ದರು.
ಭಾರತ್ ಮೇಳದ ಸಂಚಾಲಕ ರಮಣಾಚಾರ್ಯ ಸ್ವಾಗತಿಸಿ ವಂದಿಸಿದರು. ಹಲಸು ಮೇಳವು ಗೀತಾ ಮಂದಿರದಲ್ಲಿ ಬೆಳಿಗ್ಗೆ 8ರಿಂದ ಸಂಜೆ 8ರ ವರೆಗೆ ಸಾರ್ವಜನಿಕರಿಗಾಗಿ ತೆರೆದಿರುತ್ತದೆ ಎಂದು ಸಂಚಾಲಕ ರಮಣಾಚಾರ್ಯ ತಿಳಿಸಿದ್ದಾರೆ.