×
Ad

ಮಂಗಳೂರು-ಮುಂಬೈ ವಂದೇ ಭಾರತ್ ರೈಲಿಗೆ ಪ್ರಸ್ತಾವನೆ: ಕೋಟ ಶ್ರೀನಿವಾಸ ಪೂಜಾರಿ

Update: 2025-06-14 20:35 IST

ಕುಂದಾಪುರ, ಜೂ.14: ಮಂಗಳೂರಿನಿಂದ ಮುಂಬೈಗೆ ವಂದೇ ಭಾರತ್ ರೈಲು ಸೇವೆ ಒದಗಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಿದರೆ ಡಬ್ಲಿಂಗ್, ಸುಸಜ್ಜಿತ ರೈಲು ನಿಲ್ದಾಣ ಸಹಿತ ಎಲ್ಲಾ ವ್ಯವಸ್ಥೆಗಳನ್ನು ನೀಡಲು ಸಾಧ್ಯ ವಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಲಯನ್ಸ್ ಕ್ಲಬ್ ಹಂಗಳೂರು ಇವರ ವತಿಯಿಂದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ಕುಂದಾಪುರ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್, ನೂತನ ಮೇಲ್ಛಾವಣಿ ಹಾಗೂ ಗಾರ್ಡ್‌ನ ಸುಂದರೀಕರ ಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಾಲು ಕೊಂಕಣ ರೈಲ್ವೆಯಲ್ಲಿ ಇದ್ದು ಮಹಾರಾಷ್ಟ್ರ, ಕೇರಳ ಮತ್ತು ಗೋವಾ ರಾಜ್ಯಗಳು ಒಪ್ಪಿಗೆ ಸೂಚಿಸಿದ್ದು, ರಾಜ್ಯ ಸರಕಾರ ಕೂಡ ಸಮ್ಮತಿ ಸೂಚಿಸಿದೆ. ಬೆಂಗಳೂರಿಗೆ ಹೆಚ್ಚುವರಿ ರೈಲನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ಪ್ರಯಾಣಿಕರ ದಟ್ಟಣೆ ಯನ್ನು ನೀಗಿಸಲು ಪಂಚಗಂಗಾವಳಿ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ ಎಂದರು.

ರೈಲ್ವೆ ಸೇವೆಗಳಿಂದ ಸಾಮಾನ್ಯ ಜನರಿಗೆ ಹೆಚ್ಚು ಅನುಕೂಲ. ರೈಲ್ವೆ ಸೇವೆಗಳು ಇನ್ನಷ್ಟು ಪರಿಣಾಮಕಾರಿ ಯಾಗಬೇಕಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅನುಕೂಲವಾಗುವ ಸಲಹೆ ಸಿಕ್ಕಿದಾಗ ಜನಪ್ರತಿನಿಧಿ ಗಳು ಹೆಚ್ಚು ಪರಿಣಾಮ ಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ಮಾಡಿದ ಕಾಮಾಗಾರಿಯಿಂದ ಪ್ರಯಾಣಿಕರಿಗೆ ಹೆಚ್ಚಿನ ಸೇವೆ ದೊರಕಿದೆ. ಮಳೆಗಾಲ ಮತ್ತು ಬೇಸಿಗೆಯಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮನಗಂಡು ಲಯನ್ಸ್ ಕ್ಲಬ್ ಹಂಗಳೂರು ಕೊಂಕಣ ರೈಲ್ವೆಯೊಂದಿಗೆ ಸಮನ್ವತೆ ಸಾಧಿಸಿಕೊಂಡು ರೈಲ್ವೆ ಇಲಾಖೆಯ ಮಾರ್ಗಸೂಚಿಯಂತೆ ಫ್ಲಾಟ್ ಫಾರ್ಮ್ ನವೀಕರಣ ಹಾಗೂ ಸುಸಜ್ಜಿತ ನೂತನ ಮೇಲ್ಛಾವಣಿಯನ್ನು ನಿರ್ಮಾಣ ಮಾಡಿರುವ ಕಾರ್ಯ ಸಾರ್ಥಕವಾಗಿದೆ ಎಂದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡುವ ಸಂಬಂಧ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ವಿಧಾನಸಭೆಯಲ್ಲಿ ಕೂಡ ಎಲ್ಲಾ ಶಾಸಕರು ಒಟ್ಟಾಗಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಕುಂದಾಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ ಎಂದು ಹೇಳಿದರು.

ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ರೋವನ್ ಡಿಕೋಸ್ತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ವಿಶೇಷ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ಲಯನ್ಸ್ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್, ಕೊಂಕಣ ರೈಲ್ವೆ ಸಲಹಾ ಸಮಿತಿ ಸದಸ್ಯ ಗಣೇಶ್ ಪುತ್ರನ್, ಲಯನ್ಸ್ ಜಿಲ್ಲಾ ಪ್ರಥಮ ಉಪ ರಾಜ್ಯಪಾಲೆ ಸಪ್ನಾ ಸುರೇಶ, ಜಿಲ್ಲಾ ದ್ವಿತೀಯ ಉಪ ರಾಜ್ಯಪಾಲ ರಾಜೀವ ಕೋಟ್ಯಾನ್, ಜಿಲ್ಲಾ ದ್ವಿತೀಯ ಉಪ ರಾಜ್ಯಪಾಲ ಎಲೆಕ್ಟ್ ಹರಿಪ್ರಸಾದ್ ರೈ, ಲಯನ್ಸ್ ಜಿಲ್ಲಾ ಅಂಬಾಸಿಡರ್ ಬಿ.ಅರುಣ್ ಕುಮಾರ್ ಹೆಗ್ಡೆ, ರಿಜನ್ ಚೆಯರ್‌ಮೆನ್ ಬಿ.ಸೋಮನಾಥ ಹೆಗ್ಡೆ, ಕಂದಾವರ ಗ್ರಾಪಂ ಅಧ್ಯಕ್ಷೆ ಅನುಪಮಾ ಶೆಟ್ಟಿ, ಹಂಗಳೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಮ್ಯಾಥ್ಯೂ ಜೋಸೆಫ್, ಕೋಶಾಧಿಕಾರಿ ಪುನೀತ್ ಶೆಟ್ಟಿ ಉಪಸ್ಥಿತರಿದ್ದರು.

ರೋವನ್ ಡಿಕೋಸ್ತ ಸ್ವಾಗತಿಸಿದರು. ಜೋನ್ ಚೇಯರಮೆನ್ ಎಚ್.ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರೇಟ್ಟಾ ಡಿಕೋಸ್ತ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News