ಸೀಮಿತ ಆಯಾಮದ ಚಟುವಟಿಕೆ ವಿಸ್ತಾರಗೊಳ್ಳಬೇಕು: ಡಿಡಿಪಿಐ ಡಾ.ಅಶೋಕ್ ಕಾಮತ್
ಉಡುಪಿ, ಜೂ.14: ಸೀಮಿತ ಆಯಾಮಗಳಲ್ಲಿ ನಡೆಯುವ ಚಟುವಟಿಕೆ ಗಳು ವಿಸ್ತಾರಗೊಳ್ಳಬೇಕು. ಅದು ಎಲ್ಲರನ್ನೂ ತಲುಪುವಂತೆ ನೋಡಿಕೊಳ್ಳ ಬೇಕು. ಹವಾಮಾನ ಬದಲಾವಣೆಯಂಥ ವಿಷಯಗಳು ಎಲ್ಲ ರನ್ನೂ ಮುಟ್ಟ ಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಅಶೋಕ್ ಕಾಮತ್ ಹೇಳಿದ್ದಾರೆ.
ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲೆ, ಸಿಪಿಆರ್ ಪರಿಸರ ಕೇಂದ್ರ ಚೆನ್ನೈ ಸಹಯೋಗದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಸಹಕಾರದೊಂದಿಗೆ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದಲ್ಲಿ ಜಿಲ್ಲೆಯ ಶಿಕ್ಷಕರಿಗೆ ಆಯೋಜಿಸಿದ್ದ ‘ಶಾಲೆಗಳಲ್ಲಿ ಕ್ಲೈಮೆಟ್ ಸಾಕ್ಷರತೆ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂತಹ ಕಾರ್ಯಾಗಾರಗಳು ಎಲ್ಲರನ್ನೂ ತಲುಪುವಂತೆ ಮೊದಲು ನೋಡಿಕೊಳ್ಳಬೇಕು. ವಿಷಯಗಳು ಮೊದಲು ಶಿಕ್ಷಕರಲ್ಲಿ ಪರಿವರ್ತನೆಗೆ ಕಾರಣವಾಗಬೇಕು. ಬಳಿಕ ಅದು ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ತಲುಪಬೇಕು ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ತಲೆಮಾರುಗಳ ಅಂತರವಿದೆ. ಇದನ್ನು ಒಪ್ಪಿಕೊಂಡು ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಮುಂದಾಗಬೇಕು. ಅದರಲ್ಲಿ ಪರಿಪೂರ್ಣತೆ ಸಾದಿಸಬೇಕು ಎಂದು ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಈ ಬಾರಿ ಜಿಪಂ ಕಾರ್ಯನಿರ್ವಹಣಾಧಿಕಾರಿ ಅವರು ಸರಕಾರಿ ಶಾಲೆಗಳಿಗೆ ದೊರೆಯುವ ತಾಪಂ ಹಾಗೂ ಜಿಪಂ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಾಗಿರುವ ಶೇ.30ರಷ್ಟು ಅನುದಾನವನ್ನು ಶಾಲೆಯಲ್ಲಿ ಕಲಿಕೆಯನ್ನು ಹೇಗೆ ಆಕರ್ಷಕ ಗೊಳಿಸಬಹುದು ಎಂಬುದಕ್ಕೆ ವಿನಿಯೋಗಿಸಲು, ಅದಕ್ಕೆ ಮೀಸಲಿರಿಸಲು ನಿರ್ಧರಿಸಿ ದ್ದಾರೆ. ಶಿಕ್ಷಕರು ದರ ಸದುಪಯೋಗಕ್ಕೆ ಮುಂದಾಗಬೇಕು ಎಂದರು.
ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಮಾತನಾಡಿ, ಶಿಕ್ಷಕರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಇರಬೇಕಾಗಿದೆ. ಪ್ರಕೃತಿಯ ಲಯವನ್ನು ಅರ್ಥ ಮಾಡಿಕೊ ಳ್ಳಬೇಕಾಗಿದೆ. ಲಯ ತಪ್ಪಿದಾಗ ಆಗುವ ಪರಿಣಾಮಗಳನ್ನು ನಾವಿಂದು ನೋಡುತಿದ್ದೇವೆ ಎಂದರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಹಾಸನದ ಪರಿಸರ ಕಾರ್ಯಕರ್ತ ಕೆ.ಎಸ್.ರವಿಕುಮಾರ್, ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರದ ಸಂಚಾಲಕ ರವಿಶಂಕರ್ ಎಸ್. ಉಪಸ್ಥಿತರಿದ್ದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿಯ ಉದಯ ಗಾಂವಕರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು. ರವಿ ವಂದಿಸಿದರು.