×
Ad

ಸರಕಾರಿ ಶಾಲೆಗಳ ಉಳಿವಿಗೆ ಸಮಾಜದ ಸಹಕಾರವೂ ಅಗತ್ಯ: ಉಡುಪಿ ಡಿಸಿ

Update: 2025-06-15 18:20 IST

ಉಡುಪಿ, ಜೂ.15: ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಮಾತ್ರ ಸಾಲದು. ಇದರ ಜೊತೆಗೆ ಸಮಾಜದ ಜನರು ಕೂಡ ಕೈ ಜೋಡಿಸಬೇಕಾದ ಅವಶ್ಯಕತೆಯಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಹೇಳಿದ್ದಾರೆ.

ಸನ್ ಮ್ಯಾಟ್ರಿಕ್ಸ್ ಬ್ಯಾನರ್‌ನಡಿ ಕಟಪಾಡಿಯ ಉದ್ಯಮಿ ಕೆ.ಸತ್ಯೇಂದ್ರ ಪೈ ಅವರು ನಿರ್ಮಿಸಿರುವ ಸ್ಕೂಲ್ ಲೀಡರ್ ಸಿನೆಮಾವನ್ನು ವಿವಿಧ ಇಲಾಖಾಧಿಕಾರಿಗಳು ಮತ್ತು ಕಲಾವಿದರೊಂದಿಗೆ ಶನಿವಾರ ಉಡುಪಿ ಭಾರತ್ ಸಿನೆಮಾಸ್‌ನಲ್ಲಿ ವೀಕ್ಷಣೆ ಮಾಡಿ ಬಳಿಕ ಅವರು ಮಾತನಾಡುತಿದ್ದರು.

ನಾನು ಎರಡು ವರ್ಷದ ಬಳಿಕ ಥಿಯೇಟರ್‌ಗೆ ಬಂದು ಸಿನೆಮಾ ನೋಡುತ್ತಿದ್ದೇನೆ. ಅದೂ ಕೂಡಾ ಡಿಸಿ ಆದ ಬಳಿಕ ನಾನು ಸಿನೆಮಾ ನೋಡುತ್ತಿರುವುದು ಇದೇ ಮೊದಲು. ಸ್ಕೂಲ್ ಲೀಡರ್ ಚಿತ್ರದಲ್ಲಿನ ಮಕ್ಕಳ ನೈಜ ಮತ್ತು ಸ್ವಾಭಾವಿಕ ಅಭಿನಯ ನನ್ನನ್ನು ಬಹಳ ಆಕರ್ಷಿಸಿತು. ಸ್ಕೂಲ್ ಲೀಡರ್ ಸಿನೆಮಾ ಸಮಾಜಕ್ಕೆ ಅದ್ಭುತ ಸಂದೇಶವನ್ನು ನೀಡಿದೆ ಎಂದರು.

ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೃಢವಾಗಿ ಸ್ಕೂಲ್ ಲೀಡರ್ ಸಿನೆಮಾದಲ್ಲಿ ಬಿಂಬಿಸಲಾಗಿದೆ. ಟೀಮ್ ವರ್ಕ್ ಮೂಲಕ ಯಶಸ್ಸನ್ನು ಸಾಧಿಸಬಹುದು ಎಂಬ ಸಂದೇಶ ನೀಡಲಾಗಿದೆ ಎಂದು ತಿಳಿಸಿದರು.

ಕಾಪು ತಹಶೀಲ್ದಾರ್ ಡಾ.ಪ್ರತಿಭಾ, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್ ಕಾಮತ್ ಮಾತನಾಡಿದರು.

ಸರಕಾರಿ ನೌಕರರ ಸಂಘದ ಸದಸ್ಯ ಆನಂದ ಜತ್ತನ್, ಬ್ರಹ್ಮಾವರ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ನಿತ್ಯಾನಂದ ಶೆಟ್ಟಿ, ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಅನ್ಸರ್ ಅಹಮದ್, ಇನ್ವೆಂಜರ್ ಟೆಕ್ನಾಲಾಜೀಸ್ ಸಂಸ್ಥೆಯ ಮುಖ್ಯಸ್ಥ ಕೃಷ್ಣ ಮೋಹನ್ ಪೈ, ಚಿತ್ರ ನಿರ್ದೇಶಕ ರಝಾಕ್ ಪುತ್ತೂರು, ಸಹ ನಿರ್ದೇಶಕ ಅಕ್ಷತ್ ವಿಟ್ಲ, ಛಾಯಾಗ್ರಾಹಕ ಮೋಹನ್ ಪಡ್ರೆ, ನಟರಾದ ಸುದರ್ಶನ್, ಅಶ್ವಿನಿ,ಯಶಸ್ ಪಿ.ಸುವರ್ಣ, ಸಾನ್ವಿ ಅಂಚನ್, ಪ್ರೀತಿ ಪಿ.ಸುವರ್ಣ, ವೈಷ್ಣವಿ, ಬಾಸುಮ ಕೊಡಗು, ಪ್ರಭಾವತಿ, ಮಮತಾ ದಯಾನಂದ ಕೆ. ಶೆಟ್ಟಿ ಉಪಸ್ಥಿತರಿದ್ದರು.

ನಿರ್ಮಾಪಕ ಕೆ. ಸತ್ಯೇಂದ್ರ ಪೈ ಕಟಪಾಡಿ ಸ್ವಾಗತಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ನಾಗೇಶ್ ಕಾಮತ್ ಕಟಪಾಡಿ ವಂದಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News