×
Ad

ಪಾಡ್ದನಗಳಲ್ಲಿ ಇತಿಹಾಸ ಹುಡುಕವ ಕಾರ್ಯ ಅಗತ್ಯ: ಡಾ.ಪುಂಡಿಕಾ

Update: 2025-07-12 17:04 IST

ಉಡುಪಿ, ಜು.12: ತುಳುನಾಡಿನ ಪಾಡ್ದಾನಗಳು ಇತಿಹಾಸ ರಚನೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಭೂತರಾಧನೆಗೆ ಸಂಬಂಧಪಟ್ಟ ಪಾಡ್ದಾನಗಳು ಶ್ರೀಮಂತ ಮೌಖಿಕ ಪರಂಪರೆಯಾಗಿದೆ. ಪಾಡ್ದನಗಳಲ್ಲಿ ಇತಿಹಾಸಗಳಿವೆ. ಇತಿಹಾಸ ಪಠ್ಯಗಳಲ್ಲದ ಈ ಮೌಖಿಕ ಪರಂಪರೆಯಲ್ಲಿ ಇತಿಹಾಸ ಹುಡುಕುವ ಕೆಲಸವನ್ನು ಇತಿಹಾಸಕಾರ ಮಾಡಬೇಕಾಗುತ್ತದೆ. ಅದನ್ನು ಸಮರ್ಥವಾಗಿ ಮಾಡಿದಾಗ ಮಾತ್ರ ಇತಿಹಾಸ ರಚನೆ ಆಗಲು ಸಾಧ್ಯವಿದೆ ಎಂದು ಪುರಾತತ್ವ ತಜ್ಞ ಹಾಗೂ ಸಂಶೋಧಕ ಡಾ.ಪುಂಡಿಕಾ ಗಣಪತಿ ಭಟ್ ಹೇಳಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ವತಿಯಿಂದ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್.ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮೌಖಿಕ ಪರಂಪರೆ ಮತ್ತು ತುಳುವ ಇತಿಹಾಸ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಇತಿಹಾಸಕಾರರಲ್ಲಿ ಕಳೆದ ನಾಲ್ಕು ದಶಕಗಳಿಂದ ಇತಿಹಾಸವನ್ನು ನೋಡುವ ದೃಷ್ಠಿ ಬದಲಾಗುತ್ತಿದೆ. ಹೊಸ ದೃಷ್ಠಿ, ಆಕರ ಬಳಸಿಕೊಂಡು ಹೊಸ ವಿಧಾನಗಳ ಮೂಲಕ ಜನರಿಗೆ ಪ್ರಾದೇಶಿಕ ಇತಿಹಾಸ ಕಟ್ಟಿಕೊಡುವ ಹೊಸ ಪರಂಪರೆ ಆರಂಭವಾಗಿದೆ. ಮೊದಲು ಇತಿಹಾಸ ಎಂಬುದು ವ್ಯಕ್ತಿ ನಿಷ್ಠೆ, ರಾಜಕೀಯ ನಿಷ್ಠೆಯಾಗಿತ್ತು. ಅಲ್ಲಿ ಮಹಿಳೆಯರಿಗೆ ಅವಕಾಶವೇ ಇಲ್ಲ ಮತ್ತು ಮಹಿಳೆಯರ ಪಾತ್ರಗಳ ಪ್ರಾಸ್ತಪಗಳಿ ರಲಿಲ್ಲ. ಒಟ್ಟಾರೆ ರಾಜನಿಷ್ಠೆಯ ಇತಿಹಾಸ ಎಂಬಂತೆ ಇತ್ತು. ಆದರೆ ಇಂದು ಜನ ನಿಷ್ಠೆ ಹಾಗೂ ಸಮಾಜ ನಿಷ್ಠೆಯ ಇತಿಹಾಸ ರಚನೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಭೂತಾರಧನೆಗಳು ಕೇವಲ ಆರಾಧನೆ ಮಾತ್ರವಲ್ಲ. ಅದರ ಹಿನ್ನೆಲೆಯಲ್ಲಿ ಭೂತಕ್ಕೆ ಸಂಬಂಧಿಸಿ ಪಾಡ್ದಾನಗಳಿರುತ್ತವೆ. ಅದರಲ್ಲಿ ಭೂತದ ಹುಟ್ಟು, ಮಹಿಮೆ, ಪ್ರಸರಣಗಳ ಎಲ್ಲ ಮಾಹಿತಿ ಸಿಗುತ್ತದೆ. ಇತಿಹಾಸಕ್ಕೆ ಪೂರಕವಾದ ಮಾಹಿತಿಗಳು ಈ ಪಾಡ್ದಾನಗಳಲ್ಲಿ ದೊರೆಯುತ್ತವೆ. ಜನಜೀವನ ಅರ್ಥ ಮಾಡಲು ಪಾಡ್ದನಗಳಿಂದ ಸಾಧ್ಯ ಎಂದು ಅವರು ತಿಳಿಸಿದರು.

ಪಾಡ್ದನ ಹಾಗೂ ಪಾರಂಪರಿಕ ಆಕರಗಳನ್ನು ಪ್ರತ್ಯೇಕವಾಗಿ ವಿಂಗಡಸದೆ ವಿಮರ್ಶಿಸಿದಾಗ ಹೊಸಹೊಸ ಇತಿಹಾಸ ಮುಖಗಳು ಗಮನಕ್ಕೆ ಬರಲು ಸಾಧ್ಯ. ಇತಿಹಾಸ ಸಂಶೋಧನೆ ಮಾಡುವಾಗ ಪಾಡ್ದನಗಳನ್ನು ನಿರ್ಲಕ್ಷಿಸದೆ ಸಮರ್ಥ ವಾಗಿ ಬಳಸಿಕೊಳ್ಳುವ ಪರಂಪರೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಇತಿಹಾಸ ತಜ್ಞೆ ಡಾ.ಮಾಲತಿ ಕೃಷ್ಣಮೂರ್ತಿ ಅವರಿಗೆ ಹಿರಿಯ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣುಭಟ್ ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ವಹಿಸಿದ್ದರು.

ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಚೇಳಾರುಗುತ್ತು ಎಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ಸಹ ಸಂಶೋಧಕ ಡಾ.ಅರುಣ್ ಕುಮಾರ್ ಎಸ್.ಆರ್. ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News