×
Ad

ಸಂವಿಧಾನ ವಿರೋಧಿ ಸಂಘಟನೆಗಳನ್ನು ದಿಕ್ಕರಿಸಿ: ಕಲ್ಕುಳಿ ವಿಠಲ್ ಹೆಗ್ಡೆ

Update: 2025-07-14 22:19 IST

ಉಡುಪಿ, ಜು.14: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಹೃದಯ ಹೃದಯಗಳನ್ನು ಬೆಸೆ ಯೋಣ ಎಂಬ ಧೈಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ ’ಸೌಹಾರ್ದ ಸಂಚಾರ’ವನ್ನು ಸೋಮವಾರ ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲಾಯಿತು.

ಉಡುಪಿ ಜಾಮೀಯ ಮಸೀದಿಯಿಂದ ಆರಂಭಗೊಂಡ ಸೌಹಾರ್ದ ಸಂಚಾರವು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಉಡುಪಿ ಶೋಕಾ ಮಾತಾ ಇಗರ್ಜಿಯಲ್ಲಿ ಸಮಾಪ್ತಿಗೊಂಡಿತು.

ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ, ನಮ್ಮ ಎಲ್ಲರ ಸಮಸ್ಯೆಗಳನ್ನು ನಮ್ಮ ಸಂವಿಧಾನವು ಸಾಮರಸ್ಯ, ಸಮಾನತೆ ಹಾಗೂ ಜಾತ್ಯತೀತವಾಗಿ ಬಗೆಹರಿಸಿ ಕೊಡುತ್ತದೆ. ಆ ಸಂವಿಧಾನದ ಆತ್ಮವಾಗಿರುವ ಸಮಾನತೆ ಹಾಗೂ ಜಾತ್ಯತೀತೆಯನ್ನು ಪ್ರಶ್ನೆ ಮಾಡು ವವರು ಇಂದು ಅಧಿಕಾರದಲ್ಲಿ ಇದ್ದಾರೆ. ಇದರಿಂದ ನಮ್ಮ ಸಂವಿಧಾನವೇ ಇಂದು ಬಿಕ್ಕಟ್ಟಿನಲ್ಲಿದೆ. ಆದುದರಿಂದ ಈ ದೇಶದ ಪ್ರಜ್ಞಾವಂತ ಎಲ್ಲ ನಾಗರಿಕರು ಎಚ್ಚೆತ್ತು ಕೊಳ್ಳಬೇಕು ಎಂದು ಹೇಳಿದರು.

ನಮ್ಮ ಧರ್ಮ, ನಂಬಿಕೆಗಳು ಖಾಸಗಿಯೇ ಹೊರತು ಸಾರ್ವಜನಿಕ ಅಲ್ಲ. ಅದನ್ನು ಒಬ್ಬರ ಮೇಲೆ ಎತ್ತಿ ಕಟ್ಟಿ ಅಮಾಯಕರ ಕೊಲೆ ಮಾಡುವ ಕೃತ್ಯಗಳು ಈ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಈ ನಾಡಿನ ಸಾವಿರಾರು ವರ್ಷಗಳಿಂದ ಎಲ್ಲ ಜಾತಿ ಧರ್ಮದವರು ಸೌಹಾದರ್ತೆಯಿಂದ ಬಾಳಿ ಬದುಕುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಿಂದ ಕೆಲವು ವ್ಯಕ್ತಿಗಳ ಪ್ರಚೋದನೆಗೆ ನಮ್ಮ ಜನರು ಬಲಿಯಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇಂದು ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಹಾಗೂ ಕೆಲ ಜಾತಿಯ ಯುವಕರೇ ಇದ್ದಾರೆ. ದುಡಿದು ತಿನ್ನಬೇಕಾದ ಹಾಗೂ ತಂದೆತಾಯಿಗೆ ಆಸರೆಯಾಗಬೇಕಾದ ಮಕ್ಕಳು ಜೈಲಿನಲ್ಲಿ ಕೊಳೆಯುತ್ತಿರುವುದು ದುರಂತ. ಆ ದುಷ್ಟ ಶಕ್ತಿಯನ್ನು ನಾವೆಲ್ಲ ಸೇರಿ ಸೋಲಿಸಬೇಕು. ಸಮಾನತೆ, ಸಂವಿಧಾನ, ಜಾತ್ಯತೀತತೆ ವಿರುದ್ಧ ಇರುವ ಸಂಘಟನೆಗಳನ್ನು ನಾವೆಲ್ಲ ಒಗ್ಗಟ್ಟು ಆಗುವ ಮೂಲಕ ದಿಕ್ಕರಿಸಬೇಕು ಎಂದು ಅವರು ಹೇಳಿದರು.

ಸಾಮಾಜಿಕ ಹೋರಾಟಗಾರ ಅಮೃತ್ ಶೆಣೈ, ಸೌಹಾರ್ದ ಸಂಚಾರ ಸಮಿತಿಯ ಅಧ್ಯಕ್ಷ ಹಂಝತ್ ಹೆಜಮಾಡಿ, ಬೈಂದೂರು ಜೋಗಿಮನೆಯ ಶ್ರೀವಸಂತನಾಥ ಗುರುಜೀ, ಚರ್ಚಿನ ಸಹಾಯಕ ಧರ್ಮಗುರು ರೆ.ಫಾ. ಲಿಯೋ ಪ್ರವೀಣ್ ಡಿಸೋಜ ಸೌಹಾರ್ದ ಸಂದೇಶ ನೀಡಿದರು.

ಧರ್ಮಗುರು ಫಾದರ್ ವಿಲಿಯಂ ಮಾರ್ಟಿಸ್, ಎಸ್‌ವೈಎಸ್ ಸಮಿತಿಯ ರಾಜ್ಯಾಧ್ಯಕ್ಷ ಬಶಿರ್ ಸಅದಿ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಮೌಲಾನ ಅಬೂಬಕರ್ ಸಿದ್ದೀಕ್ ಮೊಂಟಗೊಳಿ, ನ್ಯಾಯವಾದಿ ಹಬೀಬ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಪ್ರಮುಖರಾದ ಎಂ.ಎ.ಗಫೂರ್, ಡಾ.ಗಣನಾಥ ಎಕ್ಕಾರು, ಪ್ರಶಾಂತ್ ಜತ್ತನ್ನ, ರಮೇಶ್ ಕಾಂಚನ್, ಸುಂದರ್ ಮಾಸ್ಟರ್, ಶ್ಯಾಮರಾಜ್ ಬಿರ್ತಿ, ನಾಗೇಶ್ ಉದ್ಯಾವರ, ಪ್ರಭಾಕರ ಪೂಜಾರಿ, ಸುಭಾನ್ ಹೊನ್ನಾಳ, ಇಸ್ಮಾಯಿಲ್ ಹುಸೇನ್ ಕಟಪಾಡಿ, ಹನೀಫ್ ಹಾಜಿ ಅಂಬಾಗಿಲು, ತೌಫಿಕ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಎಸ್‌ವೈಎಸ್ ರಾಜ್ಯ ಸಂಯೋಜಕ ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News