ಮೀನುಗಾರರ ಜೀವ ಮುಖ್ಯ, ಹವಾಮಾನ ಮುನ್ಸೂಚನೆ ಪಾಲಿಸಿ: ಕರಾವಳಿ ಭಾಗದ ಮೀನುಗಾರ ಬಂಧುಗಳಿಗೆ ಸಚಿವರ ಮನವಿ
ಉಡುಪಿ: ಮೀನುಗಾರರ ಬದುಕು ಪ್ರಕೃತಿಯೊಂದಿಗೆ ಸೆಣಸಾಟ ಹೌದು. ಆದರೆ ಮೀನುಗಾರರ ಜೀವ, ಬದುಕು ಅತಿ ಮುಖ್ಯ. ಹೀಗಾಗಿ ಮಳೆಗಾಲದ ಸಂದರ್ಭದಲ್ಲಿ ಅಪಾಯವನ್ನು ತೆಗೆದುಕೊಂಡು ಮೀನುಗಾರಿಕೆಗೆ ಇಳಿಯಬೇಡಿ. ಕಾಲಕಾಲಕ್ಕೆ ಹವಾಮಾನ ಇಲಾಖೆ ನೀಡುವ ಮುನ್ಸೂಚನೆ ಗಳನ್ನು ದಯವಿಟ್ಟು ಎಲ್ಲಾ ಮೀನುಗಾರರು ಪಾಲಿಸುವಂತೆ ರಾಜ್ಯ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಮೀನುಗಾರಿಕೆ ವೇಳೆ ದೋಣಿ ಮಗುಚಿ ನಡೆದ ದುರಂತದಲ್ಲಿ ಮೃತಪಟ್ಟ ಪಿತ್ರೋಡಿಯ ನೀಲಾಧರ ತಿಂಗಳಾಯರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಬಳಿಕ ಸಚಿವರು ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು.
ಈ ವರ್ಷ ಕಳೆದ ಕೆಲವು ದಿನಗಳಿಂದ ಮೀನುಗಾರರಿಕೆ ಸಂದರ್ಭದಲ್ಲಿ ಹಲವು ದುರಂತಗಳು ಸಂಭವಿ ಸಿದ್ದು, ಹಲವಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮೊದಲು ಉಡುಪಿಯಲ್ಲಿ, ನಂತರ ಭಟ್ಕಳ ಹಾಗೂ ಮುರ್ಡೇಶ್ವರಗಳಲ್ಲಿ, ಇದೀಗ ಇಂದು ಗಂಗೊಳ್ಳಿಯಲ್ಲಿ ಮೀನುಗಾರಿಕಾ ದೋಣಿ ಮಗುಚಿ ಮೂವರು ನಾಪತ್ತೆಯಾಗಿರುವ ಮಾಹಿತಿ ಬಂದಿದೆ. ಇಂಥ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿರು ವುದು ಅತೀವ ನೋವು ತಂದಿದೆ ಈ ಎಲ್ಲಾ ಮೀನುಗಾರ ಕುಟುಂಬಗಳಿಗೆ ಸರಕಾರದ ವತಿಯಿಂದ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು ಎಂದರು.
ನೀಲಾಧರರು ಇದ್ದ ದೋಣಿ ಮಗುಚಿ ಬಿದ್ದು ಅವರನ್ನು ತಕ್ಷಣ ಮೇಲಕ್ಕೆತ್ತಿ ತತ್‌ಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ ಉಳಿಸಿಕೊಳ್ಳಲಾಗಲ್ಲಿಲ್ಲ. ಜನಪ್ರತಿನಿ ಧಿಗಳು ಹಾಗೂ ಅಧಿಕಾರಿಗಳು ಮೃತರ ಮನೆಗೆ ಭೇಟಿ ನೀಡಿ ಅಗತ್ಯ ಸಹಕಾರ ನೀಡಿದ್ದಾರೆ. ಮುಂದೆಯೂ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದರು.
ಮುರ್ಡೇಶ್ವರದಲ್ಲಿ ಇತ್ತೀಚೆಗೆ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ಪ್ರಾಕೃತಿಕ ವಿಕೋಪದ ವೇಳೆ ಮೀನುಗಾರರಿಗೆ ನೀಡುವ ಪರಿಹಾರದ ಮೊತ್ತವನ್ನು 6 ಲಕ್ಷ ರೂ.ನಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದಾರೆ. ಅದೇ ರೀತಿ ದುರಂತದಿಂದ ಹಾನಿಗೊಳಗಾಗುವ ದೋಣಿ ಹಾಗೂ ಇತರ ಪರಿಕರಗಳಿಗೂ ಪರಿಹಾರದ ಘೋಷಣೆ ಮಾಡಿದ್ದಾರೆ. ಇಲ್ಲಿ ಅದನ್ನು ಪ್ರಥಮ ಬಾರಿಗೆ ವಿತರಿಸಲಾಗಿದೆ ಎಂದರು.
ರಾಜ್ಯ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ತೀರ ಭಾಗದಲ್ಲಿ ಇಂತಹ ದುರಂತ ಮತ್ತೆ ಮರುಕಳಿಸದಂತೆ ಮೀನುಗಾರರು ಎಚ್ಚರಿಕೆಯಿಂದ ಇರಬೇಕು. ಕಾಲಕಾಲಕ್ಕೆ ಹವಾಮಾನ ಇಲಾಖೆ ಯಿಂದ ನೀಡಲಾಗುವ ಮುನ್ಸೂಚನೆಗಳನ್ನು ಪಾಲಿಸಬೇಕು ಎಂದ ಅವರು, ಸಮುದ್ರ ಪ್ರಕ್ಷಬ್ಧವಾಗಿರು ವುದರಿಂದ ಕರಾವಳಿ ಭಾಗದ ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯದಂತೆ ಮನವಿ ಮಾಡಿದರು.