ಆಡಳಿತ ನಿರ್ವಹಣೆ ಕುರಿತು ಉಡುಪಿ ಜಿಲ್ಲಾಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ
ಮಲ್ಪೆ, ಜು.19: ಕರ್ನಾಟಕ ರಾಜ್ಯ ಸರಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಮಲ್ಪೆ ಯಾಂತ್ರಿಕ ದೋಣಿ(ಟ್ರಾಲ್) ಮೀನುಗಾರರ ಪ್ರಾಥಮಿಕ ಸಹಕಾರ ಸಂಘ, ಜಿಲ್ಲಾ ಸಹಕಾರ ಇಲಾಖೆಯ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕರಿಗೆ ಆಡಳಿತ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವು ಶನಿವಾರ ಮಲ್ಪೆ ಮೀನುಗಾರರ ಸಂಘದ ಸಮುದಾಯ ಭವನದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮೀನುಗಾರಿಕಾ ಸಹಕಾರಿ ಸಂಘಗಳು ಮೀನು ಗಾರಿಕೆಗೆ ಪ್ರೋತ್ಸಾಹ, ಅಭಿವೃದ್ಧಿಯಲ್ಲಿ ಮೀನುಗಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು ಸಹಕಾರಿ ಸಂಘದ ಮೂಲಕ ಜನರಿಗೆ ಮುಟ್ಟುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಭವಿಷ್ಯದ ದೃಷ್ಟಿಯಲ್ಲಿ ನಾವೆಲ್ಲರು ಒಗ್ಗಟ್ಟಾಗಿ ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಲ್ಪೆ ಯಾಂತ್ರಿಕ ದೋಣಿ(ಟ್ರಾಲ್) ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್ ಮಾತನಾಡಿ, ರಾಜ್ಯದಲ್ಲಿ 30 ಸಹಕಾರಿ ಯೂನಿಯನ್ ಇದೆ. ಅದರಲ್ಲಿ ಉಡುಪಿ ಜಿಲ್ಲೆಯು ಕಾರ್ಯ ಚಟುವಟಿಕೆಯಿಂದ ಪ್ರಥಮ ಸ್ಥಾನದಲ್ಲಿದೆ. ಎಲ್ಲ ಸಹಕಾರಿ ಸಂಘಗಳಿಗೆ ಮಾಹಿತಿ, ತರಬೇತಿಯನ್ನು ನೀಡುವುದರ ಮೂಲಕ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಅವರು ವಹಿಸಿ ದ್ದರು. ಸಂಪನ್ಮೂಲ ವ್ಯಕಿತಿಯಾಗಿ ಡಾ. ಶಿವರಾಮ ಕಾರಂತ ಟ್ರಸ್‌ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರ್, ಯೂನಿಯನ್ ನಿರ್ದೇಶಕ ನ್ಯಾಯವಾದಿ ಶ್ರೀಧರ ಪಿ.ಎಸ್. ಉಪಸ್ಥಿತರಿದ್ದರು.
ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಯಾಂತ್ರಿಕ ದೋಣಿ (ಟ್ರಾಲ್) ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಉಪಾಧ್ಯಕ್ಷ ಪ್ರಕಾಶ್ ಜಿ.ಬಂಗೇರ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್, ಸಹಕಾರಿ ಯೂನಿಯನ್ ನಿರ್ದೇಶಕ ಸುಧೀರ್ ಕುಮಾರ್ ವೈ, ಸಹಕಾರಿ ಯೂನಿಯನ್‌ನ ನಿರ್ದೇಶಕ ಸುರೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದಲ್ಲಿ ಪುರಸ್ಕಾರವನ್ನು ರಾಮಚಂದ್ರ ಕುಂದರ್ ಅವರನ್ನು ಸಮ್ಮಾನಿಸಲಾಯಿತು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.