ಕಾರ್ಕಳ: ವಾಹನ ಸಂಚಾರ ತಾತ್ಕಾಲಿಕ ನಿರ್ಬಂಧ
ಸಾಂದರ್ಭಿಕ ಚಿತ್ರ
ಉಡುಪಿ, ಜು.28: ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಸೇತುವೆಯ ಸ್ಲ್ಯಾಬ್ ಕಾಮಗಾರಿ ಮುಗಿದಿದ್ದು, ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ. ಸಾರ್ವಜನಿಕರ ಸಂಚಾರಕ್ಕೆ ಸೇತುವೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿಕೊಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಸುರಿದ ಮುಂಗಾರು ಪೂರ್ವ ಚಂಡಮಾರುತದ ಭಾರೀ ಮಳೆಯಿಂದಾಗಿ ಕಾಮಗಾರಿ ಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಅಸಾಧ್ಯ ವಾಗಿರುವುದರಿಂದ ತಾತ್ಕಾಲಿಕವಾಗಿ ನಿರ್ಮಿಸಿದ ಬದಲಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿದೆ. ಇದರಿಂದ ವಾಹನ ಅವಘಡಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಡೆಗೋಡೆ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳ ಅನ್ವಯ ಜುಲೈ 28ರಿಂದ ಆಗಸ್ಟ್ 30ರವರೆಗೆ ಮುಡಾರು ಗ್ರಾಮದ ದಿಡಿಂಬಿರಿ ಕ್ರಾಸ್ ನಿಂದ ರಾಮೇರಗುತ್ತುವರೆಗೆ ಹೋಗುವ ರಸ್ತೆಯಲ್ಲಿ ಕೊಪ್ಪಲ ಕ್ರಾಸ್‌ನಿಂದ ರಾಮೇರಗುತ್ತುವರೆಗೆ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿಬರ್ಂಧಿಸಲಾಗಿದೆ.
ಈ ಕಾಮಗಾರಿ ಪೂರ್ಣಗೊಳ್ಳುವ ತನಕ ಕಾರ್ಕಳದಿಂದ ರಾಮೇರ ಗುತ್ತು-ಕರ್ವಾಶೆ ಕಡೆ ಹೋಗುವ ವಾಹನಗಳು ಕುಂಟಿಬೈಲು ದೇವಸ್ಥಾನ ದ್ವಾರದ ರಸ್ತೆಯ ಮೂಲಕ ಸಂಚರಿಸಬಹುದಾಗಿದ್ದು, ಬಜಗೋಳಿ ಯಿಂದ ಕೆರ್ವಾಶೆ ಕಡೆಗೆ ಹೋಗುವ ಘನ ವಾಹನಗಳು ಹಡ್ಯಾಲು ಕ್ರಾಸ್ ಮೂಲಕ ಮುಡ್ರಾಲು ಮಾರ್ಗ ವಾಗಿ ಕರ್ವಾಶೆಗೆ ಸಂಚರಿಸಬಹುದಾಗಿದೆ ಹಾಗೂ ದಿಡಿಂಬಿರಿಯಿಂದ ಕೊಪ್ಪಲ ರಸ್ತೆಯಲ್ಲಿ ಕಿರಿದಾದ ಸೇತುವೆ ಇರುವುದರಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಮಾತ್ರ ಆ ಸೇತುವೆ ಮೇಲೆ ಸಂಚರಿಸ ಬಹುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.