×
Ad

ಹೊಸಂಗಡಿ, ಹಾರ್ದಳ್ಳಿಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಹಾನಿ

Update: 2025-07-28 20:47 IST

ಉಡುಪಿ, ಜು.28: ಜಿಲ್ಲೆಯಲ್ಲಿ ಮಳೆಯ ಬಿರುಸು ಸಾಕಷ್ಟು ಕಡಿಮೆಯಾಗಿದ್ದರೂ, ಆಗಾಗ ಮಳೆಯೊಂದಿಗೆ ಬೀಸುತ್ತಿರುವ ಗಾಳಿಯಿಂದಾಗಿ ಹಾನಿಯ ಪ್ರಕರಣಗಳು ಹೆಚ್ಚುತ್ತಿದೆ. ಅದೇ ರೀತಿ ಅಲ್ಲಲ್ಲಿ ತೋಟಗಾರಿಕಾ ಬೆಳೆಗಳಿಗೂ ಸಾಕಷ್ಟು ಹಾನಿಯಾಗುತ್ತಿದ್ದು, ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಆರು ತೋಟಗಾರಿಕಾ ಬೆಳೆ ಹಾನಿ ಪ್ರಕರಣ, ಮೂರು ಜಾನುವಾರು ಕೊಟ್ಟಿಗೆ ಹಾನಿ ಪ್ರಕರಣ ಹಾಗೂ 40ಕ್ಕೂ ಅಧಿಕ ಮನೆ ಹಾನಿ ಪ್ರಕರಣಗಳು ವರದಿಯಾಗಿವೆ. ಇವುಗಳಿಂದ ಒಟ್ಟಾರೆ ಯಾಗಿ 16 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಇಂದು ಸಹ ಕುಂದಾಪುರ ತಾಲೂಕಿನಲ್ಲಿ ಅತ್ಯಧಿಕ ಹಾನಿ ಸಂಭವಿಸಿದೆ. ಇಂದು ವರದಿಯಾಗಿರುವ ಪ್ರಕರಣಗಳಲ್ಲಿ 20ಕ್ಕೂ ಅಧಿಕ ಮನೆ ಹಾನಿ ಪ್ರಕರಣಗಳು, ಆರು ತೋಟಗಾರಿಕಾ ಬೆಳೆ ಹಾನಿ ಹಾಗೂ ಎರಡು ಕೊಟ್ಚಿಗೆ ಹಾನಿ ಪ್ರಕರಣಗಳು ಕುಂದಾಪುರ ತಾಲೂಕಿನ ವಿವಿದೆಡೆಗಳಿಂದ ವರದಿಯಾಗಿವೆ. ಉಳಿದಂತೆ ಬೈಂದೂರು, ಕಾಪು, ಬ್ರಹ್ಮಾವರ, ಉಡುಪಿ ಹಾಗೂ ಹೆಬ್ರಿ ತಾಲೂಕುಗಳಿಂದಲೂ ಸಾಕಷ್ಟು ಪ್ರಕರಣಗಳು ವರದಿಯಾಗಿವೆ.

ಕುಂದಾಪುರ ತಾಲೂಕಿನ ಹೊಸಂಗಡಿಯ ಗಿರೀಶ್ ಆಚಾರ್ಯ, ಹಾರ್ದಳ್ಳಿ ಮಂಡಳಿ ಗ್ರಾಮದ ಕುಶಲ ಶೆಟ್ಟಿ ಹಾಗೂ ಸಿದ್ಧಾಪುರ ಗ್ರಾಮದ ಸುಜಾತಾ ಶೆಟ್ಟಿ ಅವರಿಗೆ ಸೇರಿದ ನೂರಾರು ಅಡಿಕೆ ಮರಗಳು, ಬಾಳೆ ಗಿಡಗಳು, ತೆಂಗಿನ ಮರ ಸೇರಿದಂತೆ ವಿವಿಧ ಜಾತಿಗೆ ಸೇರಿದ ಮರಗಳು ಧರಾಶಾಹಿಯಾಗಿವೆ. ಅಲ್ಲದೇ ಬಸ್ರೂರು, ಜನ್ಸಾಲೆ, ಹೆನೆಬೈಲು ಗ್ರಾಮಗಳಿಂದಲೂ ಬಿರುಗಾಳಿಯಿಂದಾಗಿ ಹಲವು ತೋಟಗಳಿಗೆ ಹಾನಿಯಾಗಿರುವ ಮಾಹಿತಿಗಳು ಬಂದಿವೆ.

ಇನ್ನು ಕುಂದಾಪುರ ತಾಲೂಕಿನ ಹಕ್ಲಾಡಿಯ ಲಕ್ಷ್ಮೀ, ಕೆದೂರು ಗ್ರಾಮದ ಚಂದ್ರಶೇಖರ ಹಾಗೂ ಬೈಂದೂರು ಕಂಬದಕೋಣೆಯ ಶೋಭ ಶೆಟ್ಟಿ ಇವರಿಗೆ ಸೇರಿದ ಜಾನುವಾರು ಕೊಟ್ಚಿಗೆಗಳು ಗಾಳಿ-ಮಳೆಯಿಂದ ಕುಸಿದಿರುವ ಮಾಹಿತಿ ಬಂದಿವೆ.

ಕುಂದಾಪುರ ತಾಲೂಕು ಗುಲ್ವಾಡಿ, ಕಟ್‌ಬೆಲ್ತೂರು, ದೇವಲ್ಕುಂದ, ಸೇನಾಪುರ, ಹೊಸಾಡು, ಹೊಸೂರು, ತೆಕ್ಕಟ್ಟೆ, ಸಿದ್ಧಾಪುರ, ಕೆದೂರು, ಕೆರಾಡಿ, ಕುಂದಾಪುರ ಕಸಬಾ, ಮಚ್ಚಟ್ಟು, ಹಟ್ಟಿಯಂಗಡಿಗಳಿಂದ ಮನೆ ಹಾನಿಯ ಅನೇಕ ಪ್ರಕರಣಗಳು ವರದಿಯಾಗಿವೆ.

ಬೈಂದೂರು ತಾಲೂಕಿನಲ್ಲಿ ನಾಡ, ಪಡುವರಿ, ಯಳಜಿತ್, ಕಾಪು ತಾಲೂಕಿನಲ್ಲಿ ಮೂಡಬೆಟ್ಟು, ಕೋಟೆ, ಕುರ್ಕಾಲು, ನಂದಿಕೂರು, ಪಡು, ಉಡುಪಿ ತಾಲೂಕಿನ ಶಿವಳ್ಳಿ, ಕುಕ್ಕೆಹಳ್ಳಿ, ಅಲೆವೂರು, ಬ್ರಹ್ಮಾವರ ತಾಲೂಕಿನ ಕೆಂಜೂರು, ಹಾರಾಡಿ, ಉಪ್ಪೂರು, ಯಡ್ತಾಡಿ, ಕಾವಡಿ, ಹೆಬ್ರಿ ತಾಲೂಕಿನ ಶೇಡಿಮನೆ, ಮಡಾಮಕ್ಕಿಯ 30ಕ್ಕೂ ಅಧಿಕ ಮನೆಗಳಿಗೆ ಭಾಗಶ:ದಿಂದ ಪೂರ್ಣಪ್ರಮಾಣದ ಹಾನಿ ಸಂಭವಿಸಿರುವ ಮಾಹಿತಿಗಳು ಇಲ್ಲಿಗೆ ಬಂದಿವೆ.

ಉಡುಪಿ ಜಿಲ್ಲೆಯಲ್ಲಿ ಇಂದು ಬೆಳಗಿನವರೆಗೆ ಹಿಂದಿನ 24 ಗಂಟೆಗಳಲ್ಲಿ 28ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ ಅತ್ಯಧಿಕ 32.9ಮಿ.ಮೀ. ಮಳೆಯಾದರೆ, ಕಾರ್ಕಳದಲ್ಲಿ 30.9, ಕುಂದಾಪುರದಲ್ಲಿ 30.3, ಬೈಂದೂರಿನಲ್ಲಿ 25.2, ಉಡುಪಿಯಲ್ಲಿ 23.3, ಬ್ರಹ್ಮಾವರದಲ್ಲಿ 22.9 ಹಾಗೂ ಕಾಪುವಲ್ಲಿ 20.1ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ನಾಳೆಗೆ ಯೆಲ್ಲೊ ಅಲರ್ಟ್‌ನ್ನು ಘೋಷಿಸಲಾಗಿದೆ. ಆದರೆ ಅರಬಿಸಮುದ್ರದ ಕಡೆಯಿಂದ ಜೋರಾದ ಗಾಳಿ ಬೀಸುವ ಸಾಧ್ಯತೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಮೀನುಗಾರರಿಗೆ ನಾಳೆಯೂ ಕಡಲಿಗಿಳಿಯದಂತೆ ಸೂಚಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ಅಲೆಗಳ ಎಚ್ಚರಿಕೆಯನ್ನು ನೀಡಲಾಗಿದೆ.

ಮೆಸ್ಕಾಂಗೆ 98.93ಲಕ್ಷ ರೂ.ಹಾನಿ

ಕಳೆದ ಮೂರು ದಿನಗಳ ಗಾಳಿ-ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಮೆಸ್ಕಾಂ ಇಲಾಖೆಗೆ 98.93 ಲಕ್ಷ ರೂ.ಮೌಲ್ಯದ ಸೊತ್ತುಗಳ ನಷ್ಟ ಉಂಟಾಗಿದೆ ಎಂದು ಮೆಸ್ಕಾಂನ ಇಇ ದಿನೇಶ್ ಉಪಾಧ್ಯ ತಿಳಿಸಿದ್ದಾರೆ. ಕಳೆದ ಶನಿವಾರದಿಂದ ಇಂದು ಸಂಜೆಯವರೆಗೆ 607 ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು, 6.16ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾನಿಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಈ ಮೂಲಕ ಕಳೆದ ಎಪ್ರಿಲ್ ಒಂದರಿಂದ ಇಂದಿನವರೆಗೆ ಮಳೆ-ಗಾಳಿಯಿಂದಾಗಿ ಮೆಸ್ಕಾಂಗೆ ಒಟ್ಟು 6.46 ಕೋಟಿ ರೂ.ನಷ್ಟ ಉಂಟಾಗಿದೆ ಎಂದ ದಿನೇಶ್ ಉಪಾಧ್ಯ ಅವರು, ಈ ಅವಧಿಯಲ್ಲಿ ಒಟ್ಟು 3792 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದರೆ, 50.86 ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾನಿಗೊಂಡಿದೆ ಎಂದರು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News