×
Ad

ಪರಶುರಾಮನ ಮೂರ್ತಿಯಲ್ಲಿ ಅತ್ಯಂತ ಕಳಪೆ ಮಟ್ಟದ ಹಿತ್ತಾಳೆ ಬಳಕೆ: ಉದಯ ಕುಮಾರ್ ಶೆಟ್ಟಿ

Update: 2025-08-04 17:32 IST

ಉಡುಪಿ: ಬೈಲೂರಿನಲ್ಲಿ ನಿರ್ಮಿಸಿರುವ ಪರಶುರಾಮನ ಮೂರ್ತಿ ಕಂಚಿನದ್ದಲ್ಲ, ನಕಲಿ ಪ್ರತಿಮೆ ಎಂಬುದು ಪೊಲೀಸ್ ತನಿಖೆಯಿಂದ ಸಾಬೀತಾಗಿದೆ. ಅದರಲ್ಲೂ ಆ ಪ್ರತಿಮೆ ಅತ್ಯಂತ ಕಳಪೆ ಮಟ್ಟದ ಹಿತ್ತಾಳೆಯಿಂದ ನಿರ್ಮಿಸಿರುವುದು ಕೂಡ ತನಿಖೆಯಿಂದ ಬಹಿರಂಗವಾಗಿದೆ. ಈ ಎಲ್ಲ ಅಪವಾದವನ್ನು ದೂರ ಮಾಡಲು ಅಸಲಿ ಕಂಚಿನ ಮೂರ್ತಿ ನಿರ್ಮಿಸ ಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಾದದ ಬಳಿಕ ಬೆಟ್ಟದಿಂದ ತೆರವುಗೊಳಿಸಲಾದ ಪರಶುರಾಮ ಮೂರ್ತಿಯ ಅರ್ಧ ಭಾಗವನ್ನು ಅಲೆವೂರಿನ ಗೋಡಾನ್‌ನಲ್ಲಿ ಇಡಲಾಗಿತ್ತು. ನಾವು ಅವತ್ತೇ ಡಿಸಿ ಎಸ್ಪಿಯವರಲ್ಲಿ ಹೇಳಿದರೂ ಯಾರು ಕೂಡ ನಂಬಲಿಲ್ಲ. ಅರ್ಧ ಭಾಗ ಕೃಷ್ಣ ನಾಯ್ಕ್‌ರ ಗೋಡಾನ್‌ನಲ್ಲಿದೆ ಎಂದು ಸುಳ್ಳು ಹೇಳಿದರು. ಇದೀಗ ಎಲ್ಲವೂ ತನಿಖೆಯಿಂದ ಬಯಲಾಗಿದೆ ಎಂದರು.

ಮೂರ್ತಿಯ ಅರ್ಧ ಭಾಗ ತೆಗೆದುಕೊಂಡು ಹೋಗಿ ಶಾಸಕ ಸುನೀಲ್ ಕುಮಾರ್, ಶಿಲ್ಪಿ ಕೃಷ್ಣ ನಾಯ್ಕ್ ಅವರಿಂದ ಮತ್ತೆ ಮಾಡಿಸಿರುವುದು ಅತ್ಯಂತ ಕಳಪೆ ಮಟ್ಟದ ಹಿತ್ತಾಳೆಯ ಮೂರ್ತಿಯೇ ಆಗಿದೆ. ಪೊಲೀಸರು ವಶಪಡಿಸಿ ಕೊಂಡು ತಂದಿರುವ ಪ್ರತಿಮೆಯ ಭಾಗಗಳು ಕೂಡ ಹಿತ್ತಾಳೆಯದ್ದಾಗಿದೆ ಎಂದು ಅವರು ಆರೋಪಿಸಿದರು.

ಆಣೆ ಪ್ರಮಾಣಕ್ಕೆ ಸವಾಲು: ಕಂಚಿನ ಪರಶುರಾಮನ ಪ್ರತಿಮೆ ನಿರ್ಮಾಣ ಮಾಡುವುದಾಗಿ ಮಾತು ಕೊಟ್ಟಿದ್ದ ಶಾಸಕ ಸುನೀಲ್ ಕುಮಾರ್ ಕಂಚಿನ ಬದಲು ಪೈಬರ್ ಮತ್ತು ಇನ್ನಿತರ ವಸ್ತುಗಳಿಂದ ಮೂರ್ತಿ ನಿರ್ಮಿಸುವ ಮೂಲಕ ಕಾರ್ಕಳದ ಜನತೆಗೆ ದ್ರೋಹ ಎಸಗಿದ್ದಾರೆ. ಈ ಮೂಲಕ ಪರಶುರಾಮ ಥೀಮ್ ಪಾರ್ಕ್ ಸುನೀಲ್ ಕುಮಾರ್ ರಾಜಕೀಯದ ಹಿತಾಸಕ್ತಿಗೆ ಬಲಿಯಾಗಿದೆ ಎಂದು ಅವರು ದೂರಿದರು.

ನಾವು ಅವತ್ತು ಬೈಲೂರಿನ ಮೂರ್ತಿಯಿಂದ ತೆಗೆದುಕೊಂಡು ಬಂದಿರು ವುದು ಪೈಬರ್ ತುಂಡು ಎಂಬುದನ್ನು ಇವತ್ತೂ ಕೂಡ ಹೇಳುತ್ತೇವೆ. ಅದನ್ನು ನಾವು ಯಾವುದೇ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಹೇಳಲು ಸಿದ್ಧರಿದ್ದೇವೆ. ಸುನೀಲ್ ಕುಮಾರ್ ಮತ್ತು ಅವರ ತಂಡಕ್ಕೆ ಧೈರ್ಯ ಇದ್ದರೆ ಬೈಲೂರಿ ನಲ್ಲಿರುವ ಮಾರಿಯಮ್ಮನ ದೇವಸ್ಥಾನಕ್ಕೆ ಆಣೆ ಪ್ರಮಾಣಕ್ಕೆ ಬರಬೇಕು. ಈ ಪ್ರತಿಮೆಯಲ್ಲಿ ಒಂದು ಚೂರು ಕೂಡ ಪೈಬರ್ ಬಳಸಿಲ್ಲ ಎಂಬುದಾಗಿ ಹೇಳಬೇಕು ಎಂದು ಅವರು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸುಬೀದ್ ಎನ್.ಆರ್., ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಸೂರಜ್ ಶೆಟ್ಟಿ, ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

‘ಅಸಲಿ ಕಂಚಿನ ಮೂರ್ತಿ ನಿರ್ಮಿಸುವಂತೆ ಪಿಐಎಲ್’

ಬೈಲೂರಿನಲ್ಲಿ ಮತ್ತೆ ಅಸಲಿ ಕಂಚಿನ ಪ್ರತಿಮೆ ನಿರ್ಮಿಸುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೇನೆ. ಈ ಬಗ್ಗೆ ಹಿರಿಯರೊಂದಿಗೆ ಸಮಾಲೋಚಿಸಿ ಹೊಸ ಯೋಜನೆ ರೂಪಿಸಿ ಮೂರ್ತಿ ನಿರ್ಮಿಸಬೇಕು. ಯಾವುದೇ ಕಾರಣಕ್ಕೂ ಈ ಕಾರ್ಯವನ್ನು ನಿರ್ಮಿತಿ ಕೇಂದ್ರ ಮತ್ತು ಶಿಲ್ಪಿ ಕೃಷ್ಣ ನಾಯ್ಕ್‌ಗೆ ವಹಿಸಿಕೊಡಬಾರದು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ತಿಳಿಸಿದರು.

ಈ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಿಂದ ಸುನೀಲ್ ಕುಮಾರ್ ಆತಂಕಿತರಾಗಿದ್ದಾರೆ. ಅದಕ್ಕಾಗಿ ನನ್ನ ಅರ್ಜಿಗೆ ವಿನಾಕಾರಣ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಜನರ ನಂಬಿಕೆಯನ್ನು ಉಳಿಸಬೇಕಾದರೆ ಅಲ್ಲಿ ಮತ್ತೆ ಪರಶುರಾಮ ಪ್ರತಿಮೆ ನಿರ್ಮಾಣ ಮಾಡುವುದು ಅನಿವಾರ್ಯ. ಸುನೀಲ್ ಕುಮಾರ್ ಮತ್ತು ಅವರ ತಂಡ ಇದಕ್ಕೆ ವಿರೋಧಿಸಿದರೂ ನಾವು ಮಾಡಿಯೇ ಸಿದ್ಧ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News