ಪಾಂಬೂರು ಅಂಗನವಾಡಿಯ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ
ಶಿರ್ವ, ಅ.24: ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಬೂರು ಮಾನಸ ಅಂಗನವಾಡಿ ಕೇಂದ್ರದ ಅಂಗಳಕ್ಕೆ ಅಂದಾಜು 48 ಸಾವಿರ ರೂ. ವೆಚ್ಚದಲ್ಲಿ ಅಳವಡಿಸಿದ ಇಂಟರ್‌ಲಾಕ್ ಸೌಲಭ್ಯವನ್ನು ಶುಕ್ರವಾರ ಅಂಗನವಾಡಿ ಕೇಂದ್ರದ ಹಳೆವಿದ್ಯಾರ್ಥಿನಿ ದಿತ್ಯಾ ವಿ.ನಾಯಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ಆಚಾರ್ಯ ಮಾತನಾಡಿ ಅಂಗನವಾಡಿ ಕೇಂದ್ರಗಳಿಗೆ ಸರಕಾರ ಅಥವಾ ಪಂಚಾಯತ್ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಅಸಾಧ್ಯವಾಗಿದ್ದು, ಸ್ಥಳೀಯ ದಾನಿಗಳು ಸ್ವಯಂ ಸ್ಪೂರ್ತಿಯಿಂದ ಮಾನಸ ಅಂಗನವಾಡಿಯ ಅಗತ್ಯ ಸೌಕರ್ಯಗಳನ್ನು ಒದಗಿಸಲು ಮುಂದೆ ಬಂದಿರುವುದು ಅನುಕರಣೀಯ ಎಂದರು.
ಅಂಗನವಾಡಿಗಳ ಮೇಲ್ವಿಚಾರಕಿ ಪೂರ್ಣಿಮಾ ಮರವಂತೆ ಮಾತನಾಡಿ, ಪಾಂಬೂರು ಮಾನಸ ಅಂಗನವಾಡಿಗೆ ಸ್ಥಳೀಯ ದಾನಿಗಳು ಇನ್ವರ್ಟರ್, ಮುಂಭಾಗದ ತಗಡು ಚಪ್ಪರ, ಈಗ ಅಂಗಳಕ್ಕೆ ಇಂಟರ್‌ಲಾಕ್ ಅಳವಡಿಸಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿರುವುದು ಮಾದರಿ ಯಾಗಿದೆ. ಒಳ್ಳೆಯ ಮನಸ್ಸಿನ ದಾನಿಗಳು ಸಿಗುವುದು ಬಹಳ ವಿರಳ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಬಿ.ಪುಂಡಲೀಕ ಮರಾಠೆ, ಮಾಧವ ಕಾಮತ್ ಬಂಟಕಲ್ಲು, ಉಪೇಂದ್ರ ಪ್ರಭು ಕೋಡುಗುಡ್ಡೆ, ಪಾಸ್ಕಲ್ ಮತಾಯಸ್ ಪಡುಬೆಳ್ಳೆ, ಎಡ್ವರ್ಡ್ ಡಿಮೆಲ್ಲೊ ಶಂಕರಪುರ, ಮೇಸ್ತ್ರಿ ಕೃಷ್ಣ ದೇವಾಡಿಗ ಅವರನ್ನು ಗೌರವಿಸಲಾಯಿತು.
ಗ್ರಾಪಂ ಉಪಾಧ್ಯಕ್ಷ ಶಶಿಧರ ವಾಗ್ಲೆ, ವಾರ್ಡ್ ಪ್ರತಿನಿಧಿಗಳಾದ ಪರಶುರಾಮ ಭಟ್, ಪ್ರೇಮಾ ವೆಂಕಟೇಶ್, ,ಹರೀಶ್ ಶೆಟ್ಟಿ ಕಕ್ರಮನೆ, ಆಶಾ ಕಾರ್ಯಕರ್ತೆ ಶಕುಂತಳ ಆಚಾರ್ಯ, ಸಹಾಯಕಿ ಕವಿತಾ, ಶಿರ್ವ ಸಮುದಾಯ ಆರೋಗ್ಯಕೇಂದ್ರದ ಹಿರಿಯ ಶುಶ್ರೂಷಕಿ ಉಷಾ, ವಿಶ್ವನಾಥ್ ಬಾಂದೋಡ್ಕರ್ ಬಂಟಕಲ್ಲು, ಅಂಗನವಾಡಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಮೀನಾಕ್ಷಿ ರವಿ ಪೂಜಾರಿ ವಂದಿಸಿದರು.