×
Ad

ಹಿರಿಯ ಮದ್ದಳೆವಾದಕ ಪ್ರಭಾಕರ ಭಂಡಾರಿ ನಿಧನ

Update: 2026-01-03 21:41 IST

ಉಡುಪಿ, ಜ.3: ಬಡಗು ತಿಟ್ಟಿನ ಪ್ರಸಿದ್ಧ ಮದ್ದಳೆವಾದಕ ಕರ್ಕಿ ಪ್ರಭಾಕರ ಪಾಂಡುರಂಗ ಭಂಡಾರಿ (83) ಇಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ, ಪುತ್ರಿ, ಮೂವರು ಪುತ್ರರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ತಂದೆ ಪಾಂಡುರಂಗ ಭಂಡಾರಿಯವರಲ್ಲಿ ಯಕ್ಷಗಾನ ಹಿಮ್ಮೇಳವಾದನ ಕಲಿತು ಹದಿನಾಲ್ಕರ ಹರೆಯದಲ್ಲೇ ಮೇಳ ಸೇರಿ ಗುಂಡಬಾಳ, ಕುಮಟಾ, ಅಮೃತೇಶ್ವರೀ, ಕೊಳಗಿಬೀಸ್, ಇಡಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ನಾಲ್ಕುವರೆ ದಶಕಗಳ ಕಾಲ ಕಲಾಸೇವೆ ಮಾಡಿದ್ದರು. ನೆಬ್ಬೂರು ಮತ್ತು ಕಪ್ಪೆಕೆರೆಯವರ ಭಾಗವತಿಕೆಯಲ್ಲಿ ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆಯಂಥ ಯಕ್ಷ ದಿಗ್ಗಜರನ್ನು ಕುಣಿಸಿದ ಹಿರಿಮೆ ಇವರಿಗಿದೆ.

ಸ್ಫುಟವಾದ ಪೆಟ್ಟು, ಸ್ಪಷ್ಟ ಬೆರಳುಗಾರಿಕೆಯ ಹೊರಳಿಕೆ, ಹಾಡಿಗೆ ಪೂರಕ ವಾದನ ಕೌಶಲದಿಂದ ಪ್ರಭಾಕರ ಭಂಡಾರಿ ಜನಪ್ರಿಯತೆ ಪಡೆದಿದ್ದರು. ರಂಗದಲ್ಲಿ ಮತ್ತು ಹೊರಗಡೆಯೂ ತನ್ನ ಸಾತ್ವಿಕ, ಶಿಸ್ತಿನ ನಡವಳಿಕೆಯಿಂದ ಎಲ್ಲರ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು. ಭಂಡಾರಿ ಅವರ ಮೂವರು ಪುತ್ರರೂ ಕಲಾಕಾರಾಗಿದ್ದು, ಇವರಲ್ಲಿ ಪರಮೇಶ್ವರ ಭಂಡಾರಿ ಪ್ರಸಿದ್ಧ ಮದ್ದಳೆವಾದಕರು.

ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಯಕ್ಷಗಾನ ಕಲಾರಂಗ ಸಂಸ್ಥೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಳೆದ ವರ್ಷ ಸುವರ್ಣ ಪುರಸ್ಕಾರಕ್ಕೂ ಪಾತ್ರರಾಗಿದ್ದರು. ಭಂಡಾರಿ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News