×
Ad

ಹಿಂದುಳಿದವರ್ಗದವರು ಉನ್ನತ ಶಿಕ್ಷಣ ಪಡೆಯದಂತೆ ಹುನ್ನಾರ: ಪ್ರೊ. ಫಣಿರಾಜ್

Update: 2025-02-09 21:26 IST

ಬ್ರಹ್ಮಾವರ: ಹಿಂದುಳಿದ ವರ್ಗದವರು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಹೋಗದಂತೆ ತಡೆಯಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಅದನ್ನು ಮೆಟ್ಟುನಿಂತು ಛಲಬಿಡದೆ ಮುಂದೆ ಸಾಗಬೇಕು ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.

ಬ್ರಹ್ಮಾವರದ ಅಂಬೇಡ್ಕರ್ ಯುವಕ ಮಂಡಲ ಮತ್ತು ಅಂಕದಮನೆ ಜಾನಪದ ತಂಡದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ಕುವೆಂಪು ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣೆ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದ ಡಾ. ಶಶಿರಜ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಹಿಂದುಳಿದವರ್ಗದವರಿಗೆ ಸ್ಥಾನಮಾನ ಸಿಗಬಾರದು ಎಂಬುದು ಮೇಲ್ವರ್ಗ ದವರ ತೀರ್ಮಾನ. ಇಂದು ಪದವಿಯ ಗುಣಮಟ್ಟ ಕೆಳಮುಖವಾಗಿ ಸಾಗುತ್ತಿದೆ. ಉನ್ನತ ಶಿಕ್ಷಣದ ಸಂಶೋಧನೆಯಲ್ಲಿ ರಾಜಕಾರಣಿಗಳು ಮಾತ್ರವಲ್ಲ, ಜಾತಿ ಮನಸ್ಥಿತಿಯವರು ಕೂಡ ಸಂಶೋಧಕರಿಗೆ ದೌರ್ಜನ್ಯ, ಹಿಂಸೆಯನ್ನು ನೀಡುತ್ತಿದ್ದಾರೆ. ಇಂದು ಹಿಂದುಳಿದ ದಲಿತ ಸಮುದಾಯದ ಒಬ್ಬ ವ್ಯಕ್ತಿ ಪಿಎಚ್ ಡಿ ಪದವಿ ಪಡೆಯುವುದು ನೊಬಲ್ ಪ್ರಶಸ್ತಿಗೆ ಸಮ ಎಂದರು.

2023ನೇ ಇಸವಿಯ ಸಮೀಕ್ಷೆ ಪ್ರಕಾರ ಶೇ.22ರಷ್ಟು ಮಂದಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲಿ ಶೇ.19ರಷ್ಟು ಮೇಲ್ವರ್ಗಕ್ಕೆ ಸೇರಿದವರಾದರೆ, ಕೇವಲ ಶೇ.3ರಷ್ಟು ಮಾತ್ರ ಹಿಂದುಳಿದ ದಲಿತ ವರ್ಗದವರು. ಅದರಲ್ಲೂ ಪಿಎಚ್‌ಡಿ ಮಾಡುವುದು ಶೇ.0.05ರಷ್ಟು ಮಾತ್ರ. ಇಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್‌ಡಿ ಮಾಡಿ ಹೊರ ಬರುವುದು ದೊಡ್ಡ ಸಾಹಸದ ಕಾರ್ಯ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರ್, ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಸಹಕಾರ ಸಂಘದ ನಿರ್ದೇಶಕ ಎಸ್.ನಾರಾಯಣ್, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ಬಿ.ಆರ್. ಮಾತನಾಡಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಾಗವೇಣಿ ಪಂಡರಿನಾಥ್, ದೇವಾನಂದ್ ನಾಯಕ್ ಉಪಸ್ಥಿತರಿದ್ದರು. ಗಣೇಶ್ ಬಿರ್ತಿ ಕಾರ್ಯಕ್ರಮ ನಿರೂಪಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News