×
Ad

ರಾಜ್ಯದಲ್ಲಿ ಸ್ಕೌಟ್ಸ್-ಗೈಡ್ಸ್‌ಗೆ 10 ಲಕ್ಷ ಮಕ್ಕಳ ನೊಂದಣಿ ಗುರಿ: ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧಿಯಾ

Update: 2025-05-30 23:43 IST

ಉಡುಪಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ರಾಜ್ಯದಲ್ಲಿ ಎಂಟು ಲಕ್ಷ ವಿದ್ಯಾರ್ಥಿಗಳು ನೊಂದಣಿಗೊಂಡಿದ್ದು, ಈ ವರ್ಷ ಇದನ್ನು 10 ಲಕ್ಷ ವಿದ್ಯಾರ್ಥಿಗಳ ನೊಂದಣಿಯ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ರಾಜ್ಯದ ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧಿಯಾ ಹೇಳಿದ್ದಾರೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಇಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದ್ದ 2024-25ನೇ ಸಾಲಿನ ರಾಜ್ಯ ಮಟ್ಟದ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.

ಸ್ಕೌಟ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಯಕರಾಗಿ ಬೆಳೆಯಲು ಅವಕಾಶಗಳಿವೆ. ಇದಕ್ಕೆ ನಿಮಗೆ ಸ್ಕೌಟ್ ಮತ್ತು ಗೈಡ್ ಸ್ಪೂರ್ತಿಯನ್ನು ನೀಡುತ್ತದೆ. ಸೇವೆ ಸ್ಕೌಟ್ ಮತ್ತು ಗೈಡ್ಸ್‌ನ ಮುಖ್ಯ ಉದ್ದೇಶವಾಗಿರುತ್ತದೆ. ಇದರೊಂದಿಗೆ ಪರಿಸರ ರಕ್ಷಣೆ, ವನ್ಯಜೀವಿಗಳ ರಕ್ಷಣೆಯೂ ನಮ್ಮ ಉದ್ದೇಶವಾಗಿರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಅವರು ಮಾತನಾಡಿ, ಸೇವೆಯೇ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜೀವಾಳ. ಅಲ್ಲದೇ ಸ್ಕೌಟ್ ಮತ್ತು ಗೈಡ್ಸ್ ಮೂಲಕ ನೀವು ಸಹಜೀವಿಗಳನ್ನು ಪ್ರೀತಿಸಲು ಕಲಿಯುತ್ತೀರಿ. ಪ್ರೀತಿ ಎಲ್ಲರಿಗೂ ಅರ್ಥವಾಗುವ ಭಾಷೆಯಾಗಿದೆ. ನೀವು ಒಳ್ಳೆಯ ವ್ಯಕ್ತಿಯಾಗಿ ಪ್ರೀತಿಯನ್ನು ಹಂಚುವವರಾಗಿ ಎಂದು ಹಾರೈಸಿದರು.

ಗೈಡ್ಸ್‌ನ ರಾಜ್ಯ ಸಂಘಟನಾ ಆಯುಕ್ತೆ ಮಂಜುಳ ಸಿ. ಅವರು ಮಾತನಾಡಿ, ರಾಜ್ಯದಲ್ಲಿ 2000ಕ್ಕೂ ಅಧಿಕ ಮಂದಿ ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ಶೇ.90ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಅದೇ ರೀತಿ 100ಕ್ಕೂ ಅಧಿಕ ಮಂದಿ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಈ ಬಾರಿಯ ಎಸೆಸೆಲ್ಸಿಯಲ್ಲಿ 625ಕ್ಕೆ 625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಗೈಡ್ ವಿದ್ಯಾರ್ಥಿನಿ ದಕ್ಷಿಣ ಕನ್ನಡ ಜಿಲ್ಲೆಯ ಸಾನಿಧ್ಯ ರಾವ್ ಅವರನ್ನು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಸನ್ಮಾನಿಸಿದರು. ಪಿ.ಜಿ.ಆರ್.ಸಿಂದಿಯಾ ಅವರು ಪದಕ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ, ಡಿಡಿಪಿಯು ಮಾರುತಿ, ಡಿಡಿಪಿಐ ಗಣಪತಿ, ಸ್ಕೌಟ್‌ನ ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ ಭಟ್, ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ ಕೊಡವೂರು, ಜಿಲ್ಲಾ ಖಜಾಂಚಿ ಹರಿಪ್ರಸಾದ್ ರೈ, ಜಿಲ್ಲಾ ಕಾರ್ಯದರ್ಶಿ ಆನಂದ್ ಸಿ.ಅಡಿಗ, ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜಿ.ಪೈ ಮುಂತಾದವರು ಉಪಸ್ಥಿತರಿದ್ದರು.


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News