×
Ad

ರೆಡ್‌ಕ್ರಾಸ್: ಶಾಂತರಾಮ ಶೆಟ್ಟರಿಗೆ ಅಭಿನಂದನೆ

Update: 2025-11-07 22:21 IST

ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್‌ನ ಸಭಾಪತಿಗಳಾಗಿ ಜನಹಿತ ಕಾರ್ಯದ ಮೂಲಕ ಜನಪ್ರಿಯರಾಗಿರುವ ಸಿ.ಎ. ಶಾಂತರಾಮ ಶೆಟ್ಟಿ ಅಖಿಲ ಭಾರತ ಮಟ್ಟದ ರೆಡ್‌ಕ್ರಾಸ್‌ಗೆ ಆಯ್ಕೆಯಾಗಿರುವುದು ಕರ್ನಾಟಕ ಹೆಮ್ಮೆ ಪಡುವ ವಿಷಯವಾಗಿದೆ. 26 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ ಸಭೆಯಲ್ಲಿ ಅತಿ ಹೆಚ್ಚು 22 ಮತಗಳನ್ನು ಪಡೆದು ಅವರು ರಾಷ್ಟ್ರೀಯ ಆಡಳಿತ ಮಂಡಳಿಗೆ ಆಯ್ಕೆಯಾಗಿರುವುದು ಅವರ ಕಾರ್ಯ ದಕ್ಷತೆಗೆ ಸಿಕ್ಕಿದ ಪ್ರತಿಫಲ ಎಂದು ಕರ್ನಾಟಕ ರಾಜ್ಯ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದ್ದಾರೆ.

ರೆಡ್‌ಕ್ರಾಸ್ ರಾಷ್ಟ್ರೀಯ ಮಂಡಳಿಗೆ ಆಯ್ಕೆಯಾದ ಶಾಂತರಾಮ ಶೆಟ್ಟಿ ಅವರನ್ನು ಉಡುಪಿ ಜಿಲ್ಲಾ ರೆಡ್‌ಕ್ರಾಸ್ ಮತ್ತು ವಿಕಲಚೇತನರ ಪುನರ್ವಸತಿ ಕೇಂದ್ರದ ವತಿಯಿಂದ ನಾಯರ್‌ಕೆರೆಯ ರೆಡ್‌ಕ್ರಾಸ್ ಭವನದಲ್ಲಿ ಸನ್ಮಾನಿಸಿ ಮಾತನಾಡುತ್ತಿದ್ದರು.

ಕುಂದಾಪುರ ರೆಡ್‌ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಅವರು ಶಾಂತರಾಮ ಶೆಟ್ಟಿಯವರ ಸೇವಾ ಕಾರ್ಯವನ್ನು ಪ್ರಶಂಸಿದರು. ಜಿಲ್ಲಾ ರೆಡ್‌ಕ್ರಾಸ್ ಆಡಳಿತ ಮಂಡಳಿಯ ಸದಸ್ಯರಾದ ವಿ.ಜಿ ಶೆಟ್ಟಿ, ಟಿ.ಚಂದ್ರಶೇಖರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸಿ.ಕೆ. ಶ್ಯಾಮಲಾ, ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೇ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಸೋಜನ್ ಸಿ.ಕೆ., ಪ್ರಾಧ್ಯಾಪಕರಾದ ಡಾ.ನಿಕೇತನ, ಪ್ರೊ.ವಿದ್ಯಾ ಡಿ., ಅಖಿಲ ಭಾರತ ಕುಟುಂಬ ಕಲ್ಯಾಣ ಸಂಸ್ಥೆಯ ಜಿಲ್ಲಾಧ್ಯಕ್ಷ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರೆಡ್‌ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News