×
Ad

ರಾಜ್ಯ ಕಿರಿಯರ, 23 ವರ್ಷದೊಳಗಿನವರ ಅಥ್ಲೆಟಿಕ್: ಉಡುಪಿಯ ಸುನಿಲ್ ಸುವರ್ಣಗೆ ಲಾಂಗ್‌ಜಂಪ್ ನಲ್ಲಿ ಚಿನ್ನ

Update: 2025-08-23 21:35 IST

ಉಡುಪಿ ಆ.23: ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಪ್ರಾರಂಭಗೊಂಡ ಕರ್ನಾಟಕ ರಾಜ್ಯ ಜೂನಿಯರ್ ಹಾಗೂ 23ವರ್ಷದೊಳಗಿನವರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಆತಿಥೇಯ ಉಡುಪಿಯ ಕ್ರೀಡಾಪಟುಗಳು ಹಲವು ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದರು.

ಉಡುಪಿಯ ಸುನಿಲ್ ಎಸ್.ಸುವರ್ಣ ಅವರು 23ವರ್ಷದೊಳಗಿನ ಪುರುಷರ ವಿಭಾಗದ ಲಾಂಗ್‌ಜಂಪ್‌ನಲ್ಲಿ 6.93ಮೀ. ದೂರ ನೆಗೆದು ಚಿನ್ನದ ಪದಕ ಪಡೆದರು. ಯಾದಗಿರಿಯ ವಿಶಾಲ್ ಸಂಜೀವಪಾಯ್ ಎರಡನೇ ಹಾಗೂ ಬೆಂಗಳೂರು ಗ್ರಾಮಾಂತರದ ಲೋಹಿಯಾ ಟಿ. ಅವರು ಮೂರನೇ ಸ್ಥಾನ ಪಡೆದರು.

23 ವರ್ಷದೊಳಗಿನ ಮಹಿಳೆಯರ ಶಾಟ್‌ಪುಟ್ ಚಿನ್ನ ಉಡುಪಿಯ ಆಕಾಂಕ್ಷ ಅವರ ಪಾಲಾಯಿತು. ಅವರು ಗುಂಡನ್ನು 10.68 ಮೀ. ದೂರ ಎಸೆದು ಮೊದಲಿಗರಾದರು. ದಕ್ಷಿಣ ಕನ್ನಡದ ನಿಶೇಲ್ ಬೆಳ್ಳಿ ಹಾಗೂ ಬೆಳಗಾವಿಯ ಮಯೂರಿ ಎ. ಕಂಚಿನ ಪದಕ ಪಡೆದರು.

20ವರ್ಷದೊಳಗಿನ ಬಾಲಕಿಯರ ವಿಭಾಗದ ಶಾಟ್‌ಪುಟ್‌ನಲ್ಲಿ ಉಡುಪಿಯ ಮಾಧುರ‌್ಯ ಅವರು 11.15ಮೀ. ಸಾಧನೆಯೊಂದಿಗೆ ಚಿನ್ನದ ಪದಕ ಪಡೆದರು. ದಕ್ಷಿಣ ಕನ್ನಡದ ಐಶ್ವರ್ಯ ಮಾರುತಿ ಹಾಗೂ ಉಡುಪಿಯ ದೇವಿಕಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು.

ಮಾಧುರ್ಯ ಅವರೇ 20 ವರ್ಷದೊಳಗಿನ ಬಾಲಕಿಯರ ವಿಭಾಗದ ಡಿಸ್ಕಸ್ ಎಸೆತದ ಚಿನ್ನದ ಪದಕವನ್ನು 43.50 ಮೀ. ಸಾಧನೆಯೊಂದಿಗೆ ಪಡೆದರು. ಉಡುಪಿ ರೋಹಿತ್ ಕುಮಾರ್ ಅವರು 18 ವರ್ಷದೊಳಗಿನ ಬಾಲಕರ ಹೈಜಂಪ್‌ನಲ್ಲಿ 1.83ಮೀ. ಸಾಧನೆಯೊಂದಿಗೆ ಚಿನ್ನದ ಪದಕ ಪಡೆದರು.

ಶೃತಿ ಪಿ.ಶೆಟ್ಟಿ ವೇಗದ ಓಟಗಾರ್ತಿ: ಉಡುಪಿಯ ಶೃತಿ ಪಿ.ಶೆಟ್ಟಿ ಅವರು 20ವರ್ಷದೊಳಗಿನ ಬಾಲಕಿಯರ ವಿಭಾಗದ 100ಮೀ. ಓಟದಲ್ಲಿ ಮೊದಲಿಗರಾಗಿ ಗುರಿಮುಟ್ಟುವ ಮೂಲಕ ವೇಗದ ಓಟಗಾರ್ತಿಯಾಗಿ ಮೂಡಿಬಂದರು. ಅವರು 12.06ಸೆ.ನಲ್ಲಿ ಗುರಿ ಮುಟ್ಟಿದ್ದರು. ಬೆಳಗಾವಿಯ ವೈಭವಿ ಬೆಳ್ಳಿ ಹಾಗೂ ಮೈಸೂರಿನ ಲೇಖನಾ ಕಂಚಿನ ಪದಕ ಪಡೆದರು. 









 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News