×
Ad

ತೆಂಕನಿಡಿಯೂರು ಸರಕಾರಿ ಕಾಲೇಜಿನಲ್ಲಿ ‘ಅಭ್ಯುದಯ-2025’

ಬ್ರಹ್ಮಾವರ ಎಸ್‌ಎಂಎಸ್ ಕಾಲೇಜು ತಂಡಕ್ಕೆ ಸಮಗ್ರ ಪ್ರಶಸ್ತಿ

Update: 2025-11-12 19:51 IST

ಉಡುಪಿ, ನ.12: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಭ್ಯುದಯ ಸಮಾಜ ಕಾರ್ಯ ವೇದಿಕೆ ಆಯೋಜನೆಯಲ್ಲಿ ಮಂಗಳವಾರ ನಡೆದ ‘ಅಭ್ಯುದಯ - 2025’ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬ್ರಹ್ಮಾವರದ ಎಸ್‌ಎಂಎಸ್ ಪದವಿ ಕಾಲೇಜು ತಂಡ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಮಂಗಳೂರು ವಿವಿ ವ್ಯಾಪ್ತಿಯ ಹತ್ತಕ್ಕೂ ಅಧಿಕ ಕಾಲೇಜು ತಂಡಗಳು ಸ್ಪರ್ಧಾಕಣದಲ್ಲಿದ್ದವು. ಹಳೆಯಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡ ರನ್ನರ್‌ಅಪ್ ಸ್ಥಾನ ಪಡೆದರೆ, ಬಾರಕೂರಿನ ಎಸ್‌ಆರ್‌ಎಸ್‌ಎಂಎನ್ ಸರಕಾರಿ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆಯಿತು.

ಅಭ್ಯುದಯ-2025 ಸಮಾಜ ಕಾರ್ಯ ಫೆಸ್ಟ್‌ನ್ನು ಉಡುಪಿ- ಚಿಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಇಂತಹ ಸ್ಪರ್ಧೆಗಳು ನಾಯಕತ್ವ, ಸಂಘಟನಾ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಮಾಜಕಾರ್ಯ ತತ್ವಗಳ ಅರಿವನ್ನು ಯುವಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ ಸರಕಾರಿ ಕಾಲೇಜಿನ ಸಮಾಜಕಾರ್ಯ ವಿದ್ಯಾರ್ಥಿಗಳ ಪ್ರಯತ್ನ ಅಭಿನಂದನಾರ್ಹ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ.ಗಾಂವಕರ ವಹಿಸಿದ್ದರು. ವೇದಿಕೆಯಲ್ಲಿ ಉಡುಪಿಯ ಉದ್ಯಮಿ ಅಜಯ್ ಪಿ.ಶೆಟ್ಟಿ, ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು. ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಟಿ. ಸ್ವಾಗತಿಸಿ, ಸಮಾಜಕಾರ್ಯ ವೇದಿಕೆಯ ಅಧ್ಯಕ್ಷೆ ಸಾಕ್ಷಿ ಎ.ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್, ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಉದ್ಯಮಿ ಪ್ರಪುಲ್ಲ ಶೆಟ್ಟಿ, ಉಡುಪಿ ನಗರಸಭೆಯ ಮಾಜಿ ಸದಸ್ಯ ಸದಾನಂದ ಮೂಲ್ಯ ಕಡ್ತಲ, ಬಿಲ್ಲಾಡಿ ಗ್ರಾಪಂನ ಮಾಜಿ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಗಣೇಶ್ ಪ್ರಸಾದ್ ಜಿ. ನಾಯಕ್, ಐಕ್ಯುಎಸಿ ಸಂಚಾಲಕ ಡಾ.ವಿಷ್ಣುಮೂರ್ತಿ ಪ್ರಭು, ಶೈಕ್ಷಣಿಕ ಸಲಹೆಗಾರ ಶ್ರೀಧರ್ ಭಟ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರಾಜ್ ಕುಮಾರ್, ಸಂದೇಶ್ ಎಂ.ವಿ, ಸಹ ಪ್ರಾಧ್ಯಾಪಕ ಡಾ.ಹಮೀದ ಭಾನು ಬೇಗಂ ಉಪಸ್ಥಿತರಿದ್ದರು.

ಡಾ.ರೋಶನ್‌ಕುಮಾರ್ ಶೆಟ್ಟಿ ಸ್ವಾಗತಿಸಿದರೆ, ಸುಷ್ಮಾ ಟಿ. ವಂದಿಸಿದರು. ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆಗಳ ವಿಜೇತರು :

ಕ್ವಿಝ್ : ಪ್ರಥಮ- ಎಸ್.ಆರ್.ಎಸ್.ಎಂ.ಎನ್. ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು, ದ್ವಿತೀಯ- ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರ.

ಪೋಸ್ಟರ್ ಮೇಕಿಂಗ್ : ಪ್ರಥಮ- ಇಸಿಆರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬ್ರಹ್ಮಾವರ, ದ್ವಿತೀಯ- ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರ.

ಕೊಲಾಜ್ ಮೇಕಿಂಗ್ : ಪ್ರಥಮ- ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರ, ದ್ವಿತೀಯ- ಸೈಂಟ್ ಮೇರಿಸ್ ಕಾಲೇಜು ಶಿರ್ವ.

ಪಿಪಿಟಿ ಪ್ರೆಸೆಂಟೇಶನ್ : ಪ್ರಥಮ- ಕೆನರಾ ಕಾಲೇಜು ಉರ್ವ ಮಂಗಳೂರು, ದ್ವಿತೀಯ- ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ.

ನೃತ್ಯ ಸ್ಪರ್ಧೆ : ಪ್ರಥಮ-ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ, ದ್ವಿತೀಯ-ಪೂರ್ಣಪ್ರಜ್ಞ ಕಾಲೇಜು ಉಡುಪಿ.

ಬೀದಿ ನಾಟಕ : ಪ್ರಥಮ- ಆಳ್ವಾಸ್ ಕಾಲೇಜು ಮೂಡಬಿದ್ರೆ, ದ್ವಿತೀಯ-ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ.

ರೀಲ್ಸ್ ಸ್ಪರ್ಧೆ : ಪ್ರಥಮ- ಎಸ್.ಡಿ.ಎಂ ಕಾಲೇಜು ಉಜಿರೆ, ದ್ವಿತೀಯ- ಎಂ.ಜಿ.ಎಂ. ಕಾಲೇಜು ಉಡುಪಿ.

ಸಮಗ್ರ ಬಹುಮಾನ : ಪ್ರಥಮ- ಎಸ್‌ಎಂಎಸ್ ಪದವಿ ಕಾಲೇಜು ಬ್ರಹ್ಮಾವರ, ದ್ವಿತೀಯ- ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ, ತೃತೀಯ- ಎಸ್‌ಆರ್‌ಎಸ್‌ಎಂಎನ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರಕೂರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News