×
Ad

ಉಡುಪಿ ಧರ್ಮಪ್ರಾಂತ್ಯದ ಜುಬಿಲಿ ವಿಶೇಷ ಯೋಜನೆ: ತೊಟ್ಟಂ ಚರ್ಚಿನಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

Update: 2025-05-25 21:41 IST

ಮಲ್ಪೆ: ಉಡುಪಿ ಧರ್ಮಪ್ರಾಂತ್ಯದಲ್ಲಿ 2025 ಸಾಮಾನ್ಯ ಜುಬಿಲಿ ವರ್ಷದ ಅಂಗವಾಗಿ ಸ್ವಂತ ಮನೆ ಇಲ್ಲದ ಕುಟುಂಬಕ್ಕೆ ಮನೆ ನಿರ್ಮಿಸುವ ವಿಶೇಷ ಯೋಜನೆಯ ಅಂಗವಾಗಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಚರ್ಚ್ ವ್ಯಾಪ್ತಿಯ ಬಡ ಕುಟುಂಬವೊಂದಕ್ಕೆ ನಿರ್ಮಿಸಲಾದ ಆರ್ಕ್ ಆಫ್ ಹೋಪ್ ಮನೆಯನ್ನು ರವಿವಾರ ಹಸ್ತಾಂತರಿಸಲಾಯಿತು.

ತೊಟ್ಟಂ ಚರ್ಚಿನ ವಿನೋದ್ ಮತ್ತು ಅಂಜೆಲಿನ್ ಪಿಂಟೊ ಕುಟುಂಬ ಸ್ವಂತ ಸೂರನ್ನು ಕಾಣಬೇಕು ಎಂಬ ಹಂಬಲವಿದ್ದರೂ ಕೂಡ ಆರ್ಥಿಕ ಸಮಸ್ಯೆಯಿಂದ ಅದು ಸಾಧ್ಯವಾಗಿರಲಿಲ್ಲ. ಈ ವೇಳೆ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ನೇತೃತ್ವದಲ್ಲಿ ಪಾಲನಾ ಮಂಡಳಿ ಹಾಗೂ ದಾನಿಗಳ ನೆರವಿನೊಂದಿಗೆ 13 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಲಾಯಿತು.

ವಂ.ಡೆನಿಸ್ ಡೆಸಾ ನೂತನ ಮನೆಯನ್ನು ಆಶೀರ್ವಚನ ನೆರವೇರಿಸಿ ವಿನೋದ್ ಮತ್ತು ಅಂಜೆಲಿನ್ ಪಿಂಟೊ ಕುಟುಂಬಕ್ಕೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಮಾನವನಿಗೆ ಒಂದು ಸ್ವಂತ ಮನೆಯಿದ್ದರೆ ನೆಮ್ಮದಿಯ ನಿದ್ದೆಯನ್ನು ಮಾಡಲು ಸಾಧ್ಯವಿದೆ. ಆದರೆ ಇಂದು ಎಷ್ಟೋ ಮಂದಿಗೆ ಜೀವಿಸಲು ಸ್ವಂತ ಮನೆ ಇಲ್ಲದೆ ಪರದಾಡುತ್ತಾರೆ. ಉಡುಪಿ ಧರ್ಮ ಪ್ರಾಂತ್ಯದಲ್ಲಿ 2025 ಜುಬಿಲಿ ವರ್ಷವಾಗಿ ಆಚರಿಸಲ್ಪಡುತ್ತಿದ್ದು ಈ ನಿಟ್ಟಿನಲ್ಲಿ ಧರ್ಮಾಧ್ಯಕ್ಷರು ಒಂದು ಹೊಸ ಯೋಜನೆಯನ್ನು ನೀಡಿದ್ದರು. ಧರ್ಮ ಪ್ರಾಂತ್ಯದ ವ್ಯಾಪ್ತಿಯಲ್ಲಿ 52 ಚರ್ಚುಗಳಿದ್ದು ಪ್ರತಿಯೊಂದು ಚರ್ಚಿನಲ್ಲಿ ಮನೆ ಇಲ್ಲದ ಒಬ್ಬರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ತೊಟ್ಟಂ ಚರ್ಚಿನ ಭಕ್ತಾದಿಗಳು, ಮೈಕಲ್ ಡಿಸೋಜ ಚಾರಿಟಿ ಟ್ರಸ್ಟ್, ಹಾಗೂ ಇತರ ದಾನಿಗಳ ನೆರವಿನಿಂದ ತೊಟ್ಟಂ ಚರ್ಚಿನ ಈ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಚರ್ಚಿನ ತೋಮಸ್ ಮತ್ತು ವಲೇರಿಯಾನ ನೊರೊನ್ಹಾ ದಂಪತಿ ಮನೆ ನಿರ್ಮಾಣಕ್ಕೆ ತಮ್ಮ ಜಮೀನಲ್ಲಿ 5 ಸೆಂಟ್ಸ್ ಜಾಗವನ್ನು ಉಚಿತವಾಗಿ ನೀಡಿದ್ದು, ಐದು ತಿಂಗಳ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ತೋಮಸ್ ಮತ್ತು ವಲೇರಿಯಾನ ನೊರೊನ್ಹಾ ದಂಪತಿಯನ್ನು, ಮನೆಯನ್ನು ನಿರ್ಮಿಸಿದ ಎಂಜಿನಿಯರ್ ಎರೋಲ್, ಯೋಜನೆ ಸಾಕಾರಾಗೊಳ್ಳಲು ನೇತೃತ್ವ ವಹಿಸಿದ ಧರ್ಮಗುರುಗಳನ್ನು ಸನ್ಮಾನಿಸಲಾಯಿತು.

ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ಸುಷ್ಮಾ, ಮೈಕಲ್ ಡಿಸೋಜಾ ಚಾರಿಟಿ ಟ್ರಸ್ಟ್‌ನ ಸದಸ್ಯರಾದ ಸ್ಟೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಸಂತ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಉಡುಪಿ ಕಲ್ಯಾಣಪುರ ವಲಯ ಪದಾಧಿಕಾರಿಗಳಾದ ವಿನ್ಸೆಂಟ್ ಕ್ವಾಡ್ರಸ್, ರಿಚ್ಚಾರ್ಡ್ ಡಿಸೋಜ, ತೊಟ್ಟಂ ಘಟಕದ ಅಧ್ಯಕ್ಷ ಸುಸಾನ್ನಾ ವಾಸ್, ಸಂತ ಸೆಬೆಸ್ಟಿಯನ್ ವಾರ್ಡ್ ನ ಗುರಿಕಾರರಾದ ರೊನಾಲ್ಡ್ ಫೆರ್ನಾಂಡಿಸ್, ಬಡಾನಿಡಿಯೂರು ಗ್ರಾಪಂ ಸದಸ್ಯ ಜೊಸೇಫ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.

ವಿನೋದ್ ಪಿಂಟೊ ಸ್ವಾಗತಿಸಿದರು. ವೆನಿಸ್ಸಾ ಪಿಂಟೊ ವಂದಿಸಿದರು. ಲೆಸ್ಲಿ ಆರೋಜ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News