ಉಡುಪಿ: 2028ರ ಜನವರಿ 18ರಂದು ನಡೆಯುವ ಪರ್ಯಾಯ ಮಹೋತ್ಸವದಲ್ಲಿ ಎರಡನೇ ಬಾರಿಗೆ ಉಡುಪಿ ಶ್ರೀಕೃಷ್ಣನ ಪೂಜಾ ಕೈಂಕರ್ಯ ಕ್ಕಾಗಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಮೊದಲನೆಯದಾದ ಬಾಳೆ ಮುಹೂರ್ತ ಇಂದು ಬೆಳಗ್ಗೆ ರಥಬೀದಿಯಲ್ಲಿರುವ ಸೋದೆ ವಾದಿರಾಜ ಮಠದಲ್ಲಿ ನಡೆಯಿತು.

ಮಠದ ಆವರಣದಲ್ಲಿರುವ ತೋಟದಲ್ಲಿ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ಬಾಳೆ ಮುಹೂರ್ತ ನಡೆಯುವ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಉಪಸ್ಥಿತಿತರಿದ್ದರು.  ಮುಂದಿನ ಪರ್ಯಾಯ ಸಂದರ್ಭದಲ್ಲಿ ಅನ್ನಸಂತರ್ಪಣೆಗಾಗಿ ಬಾಳೆ ಎಲೆಗಳ ಲಭ್ಯತೆಗಾಗಿ ಬಾಳೆಗಿಡಗಳೊಂದಿಗೆ ಕಬ್ಬು ಹಾಗೂ ತುಳಸಿಗಿಡಗಳನ್ನು ನೆಡಲಾಯಿತು.

ಭಾವಿ ಪರ್ಯಾಯ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರ ನೇತೃತ್ವದಲ್ಲಿ ನಡೆದ ಬಾಳೆ ಮುಹೂರ್ತವು ಪುರೋಹಿತ ಗಿರಿರಾಜ ಉಪಾಧ್ಯಾಯರು ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ನಡೆಸಿಕೊಟ್ಟರು. ಮಠದಲ್ಲಿ ನವಗ್ರಹ ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ಮೆರವಣಿಗೆಯಲ್ಲಿ ರಥಬೀದಿಯಲ್ಲಿರುವ ಚಂದ್ರಮೌಳೀಶ್ವರ, ಅನಂತೇಶ್ವರ, ಶ್ರೀಕೃಷ್ಣ, ಮುಖ್ಯಪ್ರಾಣರು ಸೇರಿದಂತೆ ವಿವಿಧ ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಬಾಳೆ ಗಿಡ, ತುಳಸಿ ಮತ್ತು ಕಬ್ಬಿನ ಗಿಡಗಳೊಂದಿಗೆ ರಥಬೀದಿಯ ಸುತ್ತ ಮೆರವಣಿಗೆಯ ಮೂಲಕ ಸೋದೆ ಮಠಕ್ಕೆ ಬಂದು ಅಲ್ಲಿ ವಿವಿಧ ಮಠ, ಶಾಖಾ ಮಠಗಳ ಪ್ರತಿನಿಧಿಗಳಿಗೆ ಗೌರವ ಅರ್ಪಿಸಲಾಯಿತು.

ಬಳಿಕ ಮೆರವಣಿಗೆಯಲ್ಲಿ ಸೋದೆ ಮಠದ ಆವರಣಕ್ಕೆ ತೆರಳಿ, ಸೋದೆ ಮಠಾಧೀಶರು ಬಾಳೆ ಗಿಡ, ತುಳಸಿ ಹಾಗೂ ಕಬ್ಬಿನ ಗಿಡಗಳನ್ನು ನೆಟ್ಟು ನೀರೆರೆದರು. ಕುಮಾರಸ್ವಾಮಿ ಸೇರಿದಂತೆ ಉಪಸ್ಥಿತರಿದ್ದ ಗಣ್ಯರು ಸಹ ಅಲ್ಲಿ ಬಾಳೆ ಗಿಡಗಳನ್ನು ನೆಟ್ಟರು.

ಮೊದಲ ಬಾರಿ ಉಡುಪಿಯ ಅಷ್ಟಮಠಗಳ ಪರ್ಯಾಯ ಪೂವಭಾವಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದರು. ಪರ್ಯಾಯಕ್ಕೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಂಗ್ರೆಸ್ ನಾಯಕ ವಿನಯಕುಮಾರ್ ಸೊರಕೆ, ರಘುಪತಿ ಭಟ್, ಎಂ.ಬಿ.ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ಸೋದೆ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ ಹಾಗೂ ಇತರ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

ಇನ್ನು ಮುಂದೆ ಇದೇ ಸರಣಿಯಲ್ಲಿ ಫೆಬ್ರವರಿ 10ರಂದು ಅಕ್ಕಿ ಮುಹೂರ್ತ ಮುಂದೆ ಕಟ್ಟಿಗೆ ಮುಹೂರ್ತ ಹಾಗೂ ಭತ್ತ ಮುಹೂರ್ತಗಳು ನಡೆಯಲಿವೆ.



 


 


 





 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ.ಬಿ ಶೆಟ್ಟಿಗಾರ್‌/ವಾರ್ತಾಭಾರತಿ

contributor