×
Ad

ಉಡುಪಿ: ವೈದ್ಯರಿಗೆ ಕೋಟ್ಯಂತರ ರೂ. ಆನ್‌ಲೈನ್ ವಂಚನೆ ಪ್ರಕರಣ; ಗುಜರಾತ್ ಮೂಲದ ಇಬ್ಬರು ಆರೋಪಿಗಳ ಬಂಧನ, 13.95ಲಕ್ಷ ರೂ. ನಗದು ವಶ

Update: 2024-08-25 14:30 IST

ಉಡುಪಿ, ಆ.25: ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ಆನ್‌ಲೈನ್ ಮೂಲಕ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಸೆನ್ ಪೊಲೀಸರು ಗುಜರಾತ್ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತ್ ರಾಜ್ಯದ ಸೂರತ್‌ನ ನವಾದಿಯಾ ಮುಖೇಶ್ ಭಾಯಿ ಗಣೇಶ್‌ಬಾಯಿ(44) ಹಾಗೂ ಗುಜರಾತ್ ರಾಜ್ಯದ ರಾಜ್‌ಕೋಟ್ ಜಿಲ್ಲೆಯ ಧರಮ್ಜೀತ್ ಕಮಲೇಶ್ ಚೌಹಾನ್(28) ಬಂಧಿತ ಆರೋಪಿಗಳು. ಇವರಿಂದ 5 ಮೊಬೈಲ್ ಪೋನ್‌ಗಳು ಹಾಗೂ 13,95,000ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್(53) ಎಂಬವರಿಗೆ ಜು.29ರಂದು ಅಪರಿಚಿತರು ಕಸ್ಟಮ್ಸ್‌ನಿಂದ ಕರೆ ಮಾಡಿ, ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬಯಿ ಕಸ್ಟಮ್ಸ್‌ರವರ ವಶದಲ್ಲಿ ಇರುವುದಾಗಿ ತಿಳಿಸಿದ್ದರು.

ಬಳಿಕ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಅರುಣ್ ಕುಮಾರ್‌ಗೆ ಕರೆ ಮಾಡಿ, ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸ ಲಾಗಿದ್ದು, ನಿಮ್ಮ ಆಧಾರ್ ಕಾರ್ಡ್‌ನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದಾರೆ. ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೆ ಜು..29ರಿಂದ ಆ.9ರ ತನಕ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ ಸೂಚಿಸಿದ್ದರು.

ಈ ಪ್ರಕರಣವನ್ನು ಸರಿಪಡಿಸಲು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು ಅದರಂತೆ ಅರುಣ್ ಕುಮಾರ್, ತಮ್ಮ ಖಾತೆಯಿಂದ ಆ.6ರಿಂದ ಆ.9ರವರೆಗೆ ಹಂತ ಹಂತವಾಗಿ ಒಟ್ಟು 1,33,81,000ರೂ. ಹಣವನ್ನು ವರ್ಗಾಯಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದರಂತೆ ಸೆನ್ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಎಸ್ಸೈ ಅಶೋಕ್, ಸಿಬ್ಬಂದಿ ಪ್ರವೀಣ ಶೆಟ್ಟಿಗಾರ್, ರಾಜೇಶ್, ಅರುಣ ಕುಮಾರ್, ಯತೀನ್ ಕುಮಾರ್, ರಾಘುವೇಂದ್ರ ಕಾರ್ಕಡ, ದಿಕ್ಷೀತ್, ಪ್ರಶಾಂತ್, ಮುತ್ತೆಪ್ಪ ಆಡೀನ್, ಮಾಯಪ್ಪಗಡದೆ, ಪರಶುರಾಮ ಮತ್ತು ಸುದೀಫ್ ಅವರನ್ನು ಒಳಗೊಂಡ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News