ಉಡುಪಿ| ಡಿಜಿಟಲ್ ಅರೆಸ್ಟ್ ಬೆದರಿಕೆ: ಮಹಿಳೆಗೆ 6 ಲಕ್ಷ ರೂ. ವಂಚನೆ
ಉಡುಪಿಎ, ಜು.31: ಮುಂಬೈ ಸೈಬರ್ ಪೊಲೀಸ್ ಹೆಸರಿನಲ್ಲಿ ಮಹಿಳೆಯೋರ್ವರಿಗೆ ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿದ ದುಷ್ಕರ್ಮಿಗಳು ಅವರನ್ನು ಹೆದರಿಸಿ, ಬೆದರಿಸಿ ಒಟ್ಟು ಆರು ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕು ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ವರದಿಯಾಗಿದೆ.
ಲಿಯೋಲ್ಲಾ ಎಂಬವರೇ ವಂಚನೆಗೊಳಗಾದವರು. ಇವರಿಗೆ ಜು.22ರಂದು ಟೆಲಿಕಾಮ್ ರೆಗ್ಯುಲೇಟರಿ ಆಫ್ ಇಂಡಿಯಾ ಎಂದು ಹೇಳಿ 11:30ರ ಸುಮಾರಿಗೆ ಕರೆ ಬಂದಿದ್ದು, ನಿಮ್ಮ ಸಿಮ್ ಕಾರ್ಡ್‌ನಲ್ಲಿ ಕಿರುಕುಳ ಹಾಗೂ ಸುಳ್ಳು ಜಾಹೀರಾತು ಬಗ್ಗೆ ಹಲವು ದೂರು ದಾಖಲಾಗಿರುವುದಾಗಿ ಹೇಳಿ ಕರೆಯನ್ನು ಮುಂಬೈ ಸೈಬರ್ ಪೊಲೀಸರಿಗೆ ವರ್ಗಾಯಿಸುವುದಾಗಿ ತಿಳಿಸಲಾಗಿತ್ತು.
ಅಪರಾಹ್ನ 12:15ಕ್ಕೆ ಮತ್ತೆ ವಾಟ್ಸಪ್ ಮೂಲಕ ವಿಡಿಯೋ ಕರೆ ಬಂದಿದ್ದು, ಅದರಲ್ಲಿ ಪೊಲೀಸ್ ಸಮವಸ್ತ್ರ ದಲ್ಲಿದ್ದ ವ್ಯಕ್ತಿ ನಿಮ್ಮ ಆಧಾರ್ ಕಾರ್ಡ್ ನರೇಶ್ ಗೊಯೆಲ್ ಮನಿ ಲಾಂಡ್ರಿಂಗ್ ಕೇಸ್‌ನಲ್ಲಿದೆ ಎಂದು ಹೇಳಿ ವಾರೆಂಟ್ ಹೊರಡಿಸಿ ನಿಮ್ಮನ್ನು ಬಂಧಿಸುವುದಾಗಿ ಬೆದರಿಸಿದ್ದು, ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿದ್ದರು.
ಬಳಿಕ ಜು.25ರಂದು ತಾವು ತಿಳಿಸಿದ ಎರಡು ಬ್ಯಾಂಕ್ ಖಾತೆಗೆ 2 ಲಕ್ಷ ಮತ್ತು 4 ಲಕ್ಷ ರೂ. ವರ್ಗಾವಣೆ ಮಾಡುವಂತೆ ತಿಳಿಸಿದ್ದು, ಒಟ್ಟು 6 ಲಕ್ಷ ರೂ.ವರ್ಗಾವಣೆ ಮಾಡಿಸಿಕೊಂಡಿದ್ದಾಗಿ ಲಿಯೋಲ್ಲಾ ಉಡುಪಿ ಸೆನ್ ಅಪರಾಧ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.