×
Ad

ವೈದ್ಯರ ಮೇಲಿನ ನಂಬಿಕೆ ಕಳಚದಂತೆ ಎಚ್ಚರ ಅಗತ್ಯ: ಡಾ.ವಿಜಯ ಕುಮಾರ್

Update: 2025-05-06 14:41 IST

ಉಡುಪಿ, ಮೇ 6: ವೈದ್ಯರನ್ನು ದೇವರಂತೆ ಕಾಣುವ ಮನೋಭಾವ ಇಂದು ಬದಲಾಗಿದ್ದು ವಿಶ್ವಾಸ, ನಂಬಿಕೆಯ ಕೊಂಡಿ ಕಳಚದಂತೆ ಎಚ್ಚರ ವಹಿಸುವುದು ಅತೀ ಅಗತ್ಯವಾಗಿದೆ ಎಂದು ಮಂಗಳೂರಿನ ಯೆನೆಪೋಯ ವಿವಿ ಸಹ ಕುಲಾಧಿಪತಿ ಡಾ.ವಿಜಯ ಕುಮಾರ್ ಹೇಳಿದ್ದಾರೆ.

ಆತ್ರಾಡಿ ಮದಗದಲ್ಲಿ ಸೋಮವಾರ ನಡೆದ ಗಾಂಧಿ ಆಸ್ಪತ್ರೆಯ 30ವರ್ಷಗಳ ಸಂಭ್ರಮದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ವೈದ್ಯರು ದೇವರಲ್ಲ, ಮನುಷ್ಯರು ಎನ್ನುವುದನ್ನು ಮನಗಾಣಬೇಕು. ನಮ್ಮ ಕರ್ತವ್ಯ ಮಾತ್ರ ನಾವು ಮಾಡುತ್ತೇವೆ. ಯಾರೇ ಹೊಗಳಲಿ, ತೆಗಳಲಿ ರೋಗಿ ಕೇಂದ್ರಿತ ನಿರ್ಧಾರದೊಂದಿಗೆ ಸರಿಯಾದ ದಾರಿಯಲ್ಲಿ ಸಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲದ ಮಾಹೆ ವಿವಿ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಮುಖ್ಯವಾಗಿದ್ದು ಬಡವರಿಗೆ ಚಿಕಿತ್ಸೆ ದುಬಾರಿಯಾಗದೆ ಕೈಗೆ ಎಟಕುವ ದರದಲ್ಲಿ ಚಿಕಿತ್ಸೆ ಸಿಗಬೇಕು. ಬಡವರಿಗೆ ದುಡಿವ ತೊಂದರೆ ನೀಗಿ ಆಸ್ಪತ್ರೆ ಖರ್ಚು ನಿಭಾಯಿಸಲು ನೆರವು ಅತ್ಯಗತ್ಯ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ನಿಗಬೇಕು, ದೂರದೃಷ್ಟಿಯ ಕೆಲಸ ಮಾಡುವವರು ಬೇಕು. ಗಾಂಧಿ ಆಸ್ಪತ್ರೆ ವತಿಯಿಂದ ಸ್ವಚ್ಚತೆಗೆ ಒತ್ತು, ಪಂಚಮಿ ಟ್ರಸ್ಟ್ ಮೂಲಕ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ಹೇಳಿದರು.

ಉದ್ಯಮಿ ಜಿ.ಶಂಕರ್ ಮಾತನಾಡಿದರು. ಐಎಂಎ ಉಡುಪಿ ಕರಾವಳಿ ಘಟಕದ ಅಧ್ಯಕ್ಷ ಡಾ.ಸುರೇಶ್ ಶೆಣೈ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಾ.ಪಂಚಮಿ, ಲಕ್ಷ್ಮೀ ಹರಿಶ್ಚಂದ್ರ, ಡಾ.ವಿದ್ಯಾ ತಂತ್ರಿ ಉಪಸ್ಥಿತರಿದ್ದರು.

ಆಸ್ಪತ್ರೆಯ ಹದಿನೈದು ಸಿಬ್ಬಂದಿಯನ್ನು ಗೌರವಿಸಲಾಯಿತು. ವೈದ್ಯರ ಬಳಗದಿಂದ ಗಾಂಧಿ ಆಸ್ಪತ್ರೆ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಎಂ.ಹರಿಶ್ಚಂದ್ರ ಅವರನ್ನು ಸನ್ಮಾನಿಸಲಾಯಿತು. ಗಾಂಧಿ ಆಸ್ಪತ್ರೆಯಲ್ಲಿ ಜನಿಸಿದ 12,000ಮಕ್ಕಳ ಪೈಕಿ ಏಳು ಮಂದಿ ಸಾಧಕ ಮಕ್ಕಳನ್ನು ಗೌರವಿಸಲಾಯಿತು. ಕುಂದಾಪುರದ ವಾಗ್ಜ್ಯೋತಿ ವಿಶೇಷ ಮಕ್ಕಳ ಶಾಲಾ ಪ್ರಾಂಶುಪಾಲ ಎಚ್.ರವೀಂದ್ರ ಅವರನ್ನು ಗೌರವಿಸಲಾಯಿತು. ಗಾಂಧಿ ಆಸ್ಪತ್ರೆಯಲ್ಲಿ ಜನಿಸಿದ ಅವಳಿ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ವ್ಯಾಸರಾಜ ತಂತ್ರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಅಶ್ವಿಜಾ ಕೆದಿಲಾಯ ಕಾಂಟೆಂಪರರಿ ನೃತ್ಯ ಪ್ರದರ್ಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News